ಕನ್ಹಯ್ಯ ಮುಟ್ಟಿದ ಪ್ರತಿಮೆ ಶುದ್ಧಗೊಳಿಸಿದ ಸಂಘಪರಿವಾರ

Update: 2016-07-02 18:26 GMT

ಪಾಟ್ನಾ, ಜು.2: ಎಬಿವಿಪಿ ಹಾಗೂ ಬಜರಂಗದಳದ ಕಾರ್ಯಕರ್ತರ ಗುಂಪೊಂದು ಬಿಹಾರದ ಬೆಗುಸರಾಯಿ ಜಿಲ್ಲೆಯಲ್ಲಿ ಹೆಸರಾಂತ ಕವಿ ದಿನಕರ್‌ರ ಪ್ರತಿಮೆಯನ್ನು ಗಂಗಾ ಜಲದಿಂದ ಶುಕ್ರವಾರ ಶುದ್ಧಿಕರಿಸಿದ್ದಾರೆ. ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಕವಿಯ ಪ್ರತಿಮೆಗೆ ಗುರುವಾರ ಪುಷ್ಪನಮನ ಸಲ್ಲಿಸಿದ್ದರು.ಅವರ ವಿರುದ್ಧ ಪ್ರತಿಭಟನೆಯಾಗಿ ಈ ಕ್ರಮ ಜರಗಿಸಲಾಗಿದೆ.

ಬೆಗುಸರಾಯಿ ಮೈದಾನದಲ್ಲಿ ಗುರುವಾರ ನಡೆದ ಕಮ್ಯುನಿಸ್ಟ್ ಪಕ್ಷದ ಸಾರ್ವಜನಿಕ ಸಮಾವೇಶದಲ್ಲಿ ಕನ್ಹಯ್ಯ್ ಕುಮಾರ್ ಪಾಲ್ಗೊಂಡ ಹಿನ್ನೆಲೆಯಲ್ಲಿ ಅದೇ ಬೆಗುಸರಾಯಿ ಮೈದಾನದಲ್ಲಿ ಎಬಿವಿಪಿ ಮತ್ತು ಬಜರಂಗದಳ ಕಾರ್ಯಕರ್ತರು ಪೂಜೆ ಮಾಡಿ ಗಂಗಾ ಜಲವನ್ನು ಸಿಂಪಡಿಸಿದ್ದಾರೆ.

ದೇಶದ್ರೋಹ ಆರೋಪ ಎದುರಿಸುತ್ತಿರುವ ಜೆಎನ್‌ಯುಎಸ್‌ಯು ಅಧ್ಯಕ್ಷ ಕನ್ಹಯ್ಯಿ ಕುಮಾರ್ ಮೈದಾನವನ್ನು ಅಶುದ್ಧಗೊಳಿಸಿದ್ದಾರೆ ಎಂದು ಎಬಿವಿಪಿ ಕಾರ್ಯಕರ್ತರು ಘೋಷಣೆ ಕೂಗಿದರು.

ಆದಾಗ್ಯೂ, ದೀರ್ಘ ಸಮಯದ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ, ಕನ್ಹಯ್ಯ ಕುಮಾರ್ ಬೆಗುಸರಾಯಿ ಜಿಲ್ಲೆಯ ತನ್ನ ಸ್ವಗ್ರಾಮ ಬಿಹತ್‌ಗೆ ಭೇಟಿ ನೀಡಿರುವುದು ಇದೇ ಮೊದಲ ಬಾರಿಯಾಗಿದೆ. ಅಲ್ಲದೆ ಕನ್ಹಯ್ಯಾ ಕುಮಾರ್ ಭೇಟಿಗಾಗಿ ಹೆತ್ತವರು, ಕುಟುಂಬ ಸದಸ್ಯರು, ನೆರೆಹೊರೆಯವರು ಹಾಗೂ ಗ್ರಾಮಸ್ಥರು ಸಂಭ್ರಮಾಚರಣೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

‘‘ದೀರ್ಘಕಾಲದಿಂದ ಕನ್ಹಯ್ಯ ಕುಮಾರ್‌ನ ಆಗಮನವನ್ನು ಕಾತರದಿಂದ ನಿರೀಕ್ಷಿಸುತ್ತಿದ್ದ ನಮಗೆ ಮಾತ್ರವಲ್ಲ ಇಡೀ ಗ್ರಾಮಕ್ಕೆ ಇದೊಂದು ಸಂಭ್ರಮಿಸುವ ಗಳಿಗೆಯಾಗಿದೆ’’ ಎಂದುಕನ್ಹಯ್ಯೆ ಕುಮಾರ್‌ನ ತಂದೆ ಜೈಶಂಕರ್ ಸಿಂಗ್ ಹೇಳಿದ್ದಾರೆ.

ಸ್ವಗ್ರಾಮ ಬಿಹತ್‌ಗೆ ಭೇಟಿ ನೀಡಿರುವ ಕನ್ಹಯ್ಯಾ ಕುಮಾರ್‌ಗೆ ಬೆದರಿಕೆಯಿರುವ ಹಿನ್ನೆಲೆಯಲ್ಲಿ ಅವರ ನಿವಾಸದ ಸುತ್ತಮುತ್ತ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ರಂಜಿತ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News