ಈ ವಾಸ್ತವವನ್ನು ಜೀರ್ಣಿಸಿಕೊಳ್ಳಲು ಸಾಧ್ಯವೇ?

Update: 2016-07-03 03:10 GMT

ಅಲೀಘಡ, ಜು.3: ಇಲ್ಲಿನ ನಿವಾಸಿಗಳಿಗೆ ನೇತಾಜಿ ಸುಬಾಷ್‌ಚಂದ್ರ ಬೋಸ್ ಮುಕ್ತ ವಿಶ್ವವಿದ್ಯಾನಿಲಯ ಪರಿಚಿತ ಹೆಸರು. ಇದರ ನಾಮಫಲಕ ಅಥವಾ ಕಟ್ಟಡವನ್ನು ಯಾರೂ ನೋಡಿಲ್ಲ. ಅದು ಎಲ್ಲಿದೆ ಎನ್ನುವುದನ್ನು ಹುಡುಕುತ್ತಾ ಹೊರಟರೆ ಅಚಲ್‌ತಾಲ್‌ನಲ್ಲಿರುವ, ಆಯುರ್ವೇದ ಚೂರ್ಣ ಮಾರಾಟಗಾರ ಶ್ಯಾಮಸುಂದರ ಶರ್ಮ (61) ಅವರ ಮಳಿಗೆಯತ್ತ ನೀವು ಹೋಗುತ್ತೀರಿ. ಇತ್ತೀಚೆಗೆ ನಕಲಿ ವಿಶ್ವವಿದ್ಯಾನಿಲಯ ಎಂದು ಯುಜಿಸಿಯಿಂದ ಘೋಷಿಸಲ್ಪಟ್ಟ ಈ ವಿಶ್ವವಿದ್ಯಾನಿಲಯದ ಕುಲಪತಿ ಇವರು!

ಉತ್ತರ ಪ್ರದೇಶದಲ್ಲಿರುವ ಈ ವಿಶ್ವವಿದ್ಯಾನಿಲಯ, ಯುಜಿಸಿಯಿಂದ ಘೋಷಿಸಲ್ಪಟ್ಟ 22 ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಒಂದು ಎಂದು ಚೂರ್ಣದಂಗಡಿ ಪಕ್ಕದ ಪುಸ್ತಕ ವ್ಯಾಪಾರಿ ಹೇಳುತ್ತಾರೆ. ಆದರೆ ನೀವು ಈ ವಿಶ್ವವಿದ್ಯಾನಿಲಯದ ಕುಲಪತಿ ಸಾಹೇಬರನ್ನು ಭೇಟಿ ಮಾಡಬಹುದು. ಅವರು ಚೂರ್ಣ ಮಾರುತ್ತಿದ್ದಾರೆ ಎಂದು ಅವರು ವಿವರಿಸುತ್ತಾರೆ.

ಆಯುರ್ವೇದ ವೈದ್ಯರ ಮಗನಾದ ಶರ್ಮಾ ತಾವು ವಿಶ್ವವಿದ್ಯಾನಿಲಯ ಕಟ್ಟಿದ ಕಥೆಯನ್ನು ರಸವತ್ತಾಗಿ ಬಣ್ಣಿಸುತ್ತಾರೆ. ಬಿಎಸ್ಸಿಯಲ್ಲಿ ಅನುತ್ತೀರ್ಣರಾದ ಇವರು, ಆಗ್ರಾ ವಿವಿಯಿಂದ ಸಮಾಜಸೇವೆಯಲ್ಲಿ ಸರ್ಟಿಫಿಕೇಟ್ ಕೋರ್ಸ್ ಮಾಡಿದರು. ಸುಭಾಷ್‌ಚಂದ್ರ ಬೋಸ್ ಅವರ ಅಭಿಮಾನಿಯಾಗಿದ್ದ ಅವರು 1990ರಲ್ಲಿ ಅವರ ಹೆಸರಿನಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸಲು ನಿರ್ಧರಿಸಿದರು.

ನೆಹರೂ ಹೆಸರಿನಲ್ಲಿ ಸಾಕಷ್ಟು ವಿವಿಗಳಿರುವಾಗ ಸ್ವಾತಂತ್ರ ಸೇನಾನಿ ಸುಭಾಷ್ ಹೆಸರಿನಲ್ಲಿ ಏಕೆ ಇರಬಾರದು ಎನ್ನುವ ಕಾರಣಕ್ಕೆ ಇದನ್ನು ಆರಂಭಿಸಿದೆ. ಜಿಲ್ಲಾಡಳಿತ ಇದಕ್ಕೆ ಭೂಮಿ ಕೇಳಿದಾಗ ನೀಡಲಿಲ್ಲ. ಆದ್ದರಿಂದ ತರಗತಿಗಳನ್ನು ಒಂದೇ ಕೊಠಡಿಯಲ್ಲಿ ಆರಂಭಿಸಿದೆವು ಎನ್ನುತ್ತಾರೆ. ಈ ವಿಶ್ವವಿದ್ಯಾನಿಲಯ ಐದನೆ ತರಗತಿವರೆಗೆ ಬೋಧನೆ ಆರಂಭಿಸಿತು. 90 ಮಕ್ಕಳು ಹಾಗೂ ಕೆಲ ಶಿಕ್ಷಕರು. ಪೊಲೀಸರು 1990ರ ಜನವರಿ 9ರಂದು ವಂಚನೆ ಆರೋಪದಲ್ಲಿ ಬಂಧಿಸಿ ಪ್ರಕರಣ ದಾಖಲಿಸಿದ್ದು, ಪ್ರಕರಣ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಬಾಕಿ ಇದೆ. 26 ವರ್ಷಗಳಿಂದ ವಿಚಾರಣೆಗೆ ಅವರು ಹೋಗುತ್ತಿದ್ದಾರೆ. ಪ್ರಕರಣವನ್ನು ಶೀಘ್ರ ಇತ್ಯರ್ಥಪಡಿಸುವಂತೆ ಹೈಕೋರ್ಟ್, ಕೆಳ ನ್ಯಾಯಾಲಯಕ್ಕೆ ಸೂಚನೆ ನೀಡಿದೆ. ತೀರ್ಪು ಬಂದ ದಿನ ನನ್ನ ಕನಸು ನನಸಾಗಿಸಿಕೊಳ್ಳುತ್ತೇನೆ ಎಂದು ಶರ್ಮಾ ಹೇಳುತ್ತಾರೆ.

ನಾವು 12ನೆ ತರಗತಿವರೆಗೆ ಮಾತ್ರ ಬೋಧನೆ ಮಾಡುತ್ತೇವೆ ಎಂದು ಶರ್ಮಾ ಸ್ಪಷ್ಟಪಡಿಸುತ್ತಾರೆ. 2008ರಲ್ಲಿ ಉತ್ತರ ಪ್ರದೇಶ ಸರಕಾರ ಈ ಸಂಸ್ಥೆಯ ಮಾನ್ಯತೆ ರದ್ದು ಮಾಡಿ, 10 ಮಂದಿಯನ್ನು ಬಂಧಿಸಿತ್ತು. ವಿಶ್ವವಿದ್ಯಾನಿಲಯ ಹೆಸರಿನಲ್ಲಿ ನಕಲಿ ಪದವಿಪತ್ರ ನೀಡುತ್ತಿದೆ ಎಂಬ ಕಾರಣಕ್ಕೆ ಕ್ರಮ ಕೈಗೊಂಡಿತು. 2000ದಲ್ಲಿ ಮುಚ್ಚಲ್ಪಟ್ಟ ಈ ಸಂಸ್ಥೆ ಮತ್ತೆ 2011ರಲ್ಲಿ ತಲೆ ಎತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News