ಢಾಕಾ ಭಯೋತ್ಪಾದಕ ದಾಳಿ: ಭಾರತೀಯಳ ಮೃತದೇಹ ನಾಳೆ ಭಾರತಕ್ಕೆ

Update: 2016-07-03 17:13 GMT

ಹೊಸದಿಲ್ಲಿ,ಜು.3: ಶುಕ್ರವಾರ ಢಾಕಾದ ರೆಸ್ಟೋರಂಟ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಭಾರತೀಯ ಯುವತಿ ತರಿಷಿ ಜೈನ್(19) ಅವರ ಪಾರ್ಥಿವ ಶರೀರವನ್ನು ಸೋಮವಾರ ಇಲ್ಲಿಗೆ ತರಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ತಿಳಿಸಿದ್ದಾರೆ.ಇದೊಂದು ಕ್ರೂರ ಹತ್ಯೆಯಾಗಿದೆ,ಇದೊಂದು ಅಸಹಜ ಸಾವು. ಕೆಲವು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿದೆ ಎಂದು ಸಚಿವೆ ರವಿವಾರ ಟ್ವೀಟ್‌ನಲ್ಲಿ ಹೇಳಿದ್ದಾರೆ.ತರಿಷಿಯ ಪಾರ್ಥಿವ ಶರೀರವನ್ನು ಆಕೆಯ ತಂದೆಯ ಒಪ್ಪಿಗೆಯೊಂದಿಗೆ ನಾಳೆ ವಿಮಾನದಲ್ಲಿ ಇಲ್ಲಿಗೆ ತರಲಾಗುತ್ತಿದೆ. ಕುಟುಂಬವು ಅದನ್ನು ಫಿರೋಜಾಬಾದ್ (ಉ.ಪ್ರ.)ಗೆ ಸಾಗಿಸಲಿದೆ ಎಂದು ಅವರು ತಿಳಿಸಿದ್ದಾರೆ.ಅಮರಿಕದ ಬರ್ಕಲಿಯ ಕ್ಯಾಲಿಫೋರ್ನಿಯಾ ವಿವಿಯ ವಿದ್ಯಾರ್ಥಿನಿಯಾಗಿದ್ದ ತರಿಷಿ ರಜೆಯಲ್ಲಿ ಢಾಕಾಕ್ಕೆ ಭೇಟಿ ನೀಡಿದ್ದಳು. ಅಲ್ಲಿ ಆಕೆಯ ತಂದೆ ಕಳೆದ 15-20 ವರ್ಷಗಳಿಂದ ಸಿದ್ಧ ಉಡುಪುಗಳ ವ್ಯವಹಾರ ನಡೆಸುತ್ತಿದ್ದಾರೆ.ಈ ಸಂಕಟ ಸಮಯದಲ್ಲಿ ಇಡೀ ದೇಶವೇ ತರಿಷಿ ಕುಟುಂಬದ ಜೊತೆಯಲ್ಲಿದೆ ಮತ್ತು ಅವರಿಗಾಗಿ ವೀಸಾ ವ್ಯವಸ್ಥೆ ಮಾಡಲಾಗಿದೆ ಎಂದೂ ಸುಷ್ಮಾ ಟ್ವೀಟಿಸಿದ್ದಾರೆ.ಢಾಕಾದ ಪ್ರತಿಷ್ಠಿತ ರಾಜತಾಂತ್ರಿಕ ಪ್ರದೇಶದಲ್ಲಿರುವ ಹೋಲಿ ಆಟಿಸನ್ ಬೇಕರಿಗೆ ನುಗ್ಗಿದ್ದ ಭಯೋತ್ಪಾದಕರು ಎಂಟು ಇಟಾಲಿಯನ್ನರು,ಏಳು ಜಪಾನಿ ಪ್ರಜೆಗಳು ಮತ್ತು ತರಿಷಿ ಸೇರಿದಂತೆ 20 ವಿದೇಶಿಯರನ್ನು ಬರ್ಬರವಾಗಿ ಹತ್ಯೆಗೈದಿದ್ದರು. ‘ಥಂಡರ್ ಬೋಲ್ಟ್’ ಎಂದು ಹೆಸರಿಸಲಾಗಿದ್ದ ರಕ್ಷಣಾ ಕಾರ್ಯಾಚರಣೆಯಲ್ಲಿ ಕಮಾಂಡೋಗಳು ಆರು ಭಯೋತ್ಪಾದಕರನ್ನು ಕೊಂದು ಓರ್ವನನ್ನು ಜೀವಂತ ಸೆರೆ ಹಿಡಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News