ವಿದ್ಯಾರ್ಥಿಗಳ ಅಮಲಿನ ಚಾಲನೆಗೆ 9 ವರ್ಷದ ಬಾಲಕಿ ಬಲಿಪಶು

Update: 2016-07-04 07:38 GMT

ಹೈದರಾಬಾದ್, ಜು.4: ಮದ್ಯದ ಅಮಲಿನಲ್ಲಿದ್ದ ವಿದ್ಯಾರ್ಥಿಗಳು ಚಲಾಯಿಸುತ್ತಿದ್ದ ವಾಹನವೊಂದು ಕಾರಿಗೆ  ಡಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ತೀವ್ರವಾಗಿ ಗಾಯಗೊಂಡ 9 ವರ್ಷದ ಶಾಲಾ ಬಾಲಕಿ ರಮ್ಯಾ ಈಗ ಹೈದರಾಬಾದ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಿದುಳು ನಿಷ್ಕ್ರಿಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆಯಲ್ಲಿ ಆಕೆಯ  ತಾಯಿ, ಅಜ್ಜ ಹಾಗೂ ಇಬ್ಬರು ಮಾವಂದಿರು ಗಾಯಗೊಂಡಿದ್ದಾರೆ. ರಮ್ಯಾ ತನ್ನ  ಶಾಲೆಯ ಮೊದಲ ದಿನ ಮುಗಿಸಿ ಕುಟುಂಬ ಸದಸ್ಯರೊಂದಿಗೆ  ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ರಮ್ಯಾಳ ಸದ್ಯದ ಸ್ಥಿತಿಯಲ್ಲಿ ಆಕೆಗೆ ನಡೆಸುವ ಯಾವುದೇ ಶಸ್ತ್ರಕ್ರಿಯೆ ಫಲಕಾರಿಯಾಗಲಿಕ್ಕಿಲ್ಲ ಹಾಗೂ ಆಕೆ ಯಾವ ಕ್ಷಣದಲ್ಲೂ ಕೊನೆಯುಸಿರೆಳೆಯಬಹುದೆಂದು ವೈದ್ಯರು ಹೇಳಿದ್ದಾರೆ.

 ಮರೆದ್ ಪಳ್ಳಿಯಲ್ಲಿರುವ ಸೈಂಟ್ ಆನ್ಸ್ ಶಾಲೆಯಿಂದ ತಮ್ಮ ಸ್ಯಾಂಟ್ರೋ ಕಾರಿನಲ್ಲಿ ರಮ್ಯಾಳೊಂದಿಗೆ  ಶುಕ್ರವಾರ ಸಂಜೆ  4 ಗಂಟೆ ಸುಮಾರಿಗೆ ಕುಟುಂಬ ಸದಸ್ಯರು ಹಿಂದಿರುಗುತ್ತಿದ್ದಾಗ ಆರು ಜನರಿದ್ದ ಐ10 ಕಾರೊಂದು ಅವರ ಸ್ಯಾಂಟ್ರೋ ಕಾರಿಗೆ ಢಿಕ್ಕಿ ಹೊಡೆದಿತ್ತು. ಅದರಲ್ಲಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಿನೆಪ್ಲೆಕ್ಸ್ ನಲ್ಲಿರುವ ಟಿಜಿಐಎಫ್ ರೆಸ್ಟಾರೆಂಟ್ ನಲ್ಲಿ ಮದ್ಯ ಸೇವಿಸಿ ಕಾರು ಚಲಾಯಿಸುತ್ತಿದ್ದರೆಂದು ಹೇಳಲಾಗಿದೆ. ಆರು ಮಂದಿಯೂ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಶನಿವಾರ ಬೆಳಗ್ಗೆ ನಡೆದ ಇನ್ನೊಂದು ಅಪಘಾತದಲ್ಲಿ 26 ವರ್ಷದ ಯುವತಿಯೊಬ್ಬಳು ಮದ್ಯ ಸೇವಿಸಿ ಆಡಿ ಕಾರನ್ನು ಓಡಿಸಿದ ಪರಿಣಾಮ  ಚೆನ್ನೈನ ಓಎಂಆರ್ ರಸ್ತೆಯಲ್ಲಿ 45 ವರ್ಷದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದರು. ಕಾರು ಚಲಾಯಿಸುತ್ತಿದ್ದ ಐಶ್ವರ್ಯಾ ನಗರದ ಖ್ಯಾತ ಇನ್ಶೂರೆನ್ಸ್ ಸರ್ವೇಯರ್ ವಿಲ್ಟನ್ ರೂಲನ್ಸ್ ಪುತ್ರಿ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News