ಅಕ್ರಮ ಭೂಮಿಯಲ್ಲಿದ್ದ ದೇವಳ ತೆರವು ರದ್ದು ಪಡಿಸಿದ ಛತ್ತೀಸ್ ಗಢ ಸರಕಾರ
ರಾಯಪುರ್, ಜು.4: ವಿಧಾನಸಭಾ ಸ್ಪೀಕರ್ ಗೌರಿಶಂಕರ್ ಅಗರ್ವಾಲ್ ಒಡೆತನದ ಚಗನ್ ಲಾಲ್ ಗೋವಿಂದ್ ರಾಮ್ ಟ್ರಸ್ಟ್ ನೇತೃತ್ವದಲ್ಲಿ ಅಕ್ರಮವಾಗಿ ನಿರ್ಮಿಸಲ್ಪಟ್ಟ ಹನುಮಾನ್ ದೇವಳವೊಂದನ್ನು ಕೆಡಹುವ ಕಾರ್ಯವನ್ನು ರವಿವಾರ ಬೆಳಿಗ್ಗೆ ಬಿಜೆಪಿ ಆಡಳಿತದ ಛತ್ತೀಸ ಗಢ ಸರಕಾರ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೈಗೆತ್ತಿಕೊಂಡಿದ್ದರೂ ನಂತರ ಕಾನೂನು ಸುವ್ಯವಸ್ಥೆ ಸಮಸ್ಯೆಯ ನೆಪವೊಡ್ಡಿ ನೆಲಸಮ ಪ್ರಕ್ರಿಯೆಯನ್ನು ಕೈಬಿಡಲಾಯಿತು.
ಈ ದೇವಳವಿರುವ ಮಹದೇವ್ ಘಾಟ್ ಪ್ರದೇಶಕ್ಕೆ ಬಿಜೆಪಿ, ಶಿವಸೇನೆ, ಭಜರಂಗದಳ ಹಾಗೂ ವಿಹಿಂಪ ಸದಸ್ಯರು ಬೆಳಗ್ಗಿನಿಂದಲೇ ಬರಲು ಆರಂಭಿಸಿ ನೆಲಸಮ ಪ್ರಕ್ರಿಯೆಯನ್ನು ಬಲವಾಗಿ ವಿರೋಧಿಸಲಾರಂಭಿಸಿದ್ದರು. ಅಲ್ಲಿದ್ದ ಕಾಂಗ್ರೆಸ್ ಸದಸ್ಯರು ರಾಜ್ಯ ಸರಕಾರವನ್ನು ದೂರಿ ಅದು ಮತೀಯ ಭಾವನೆಗಳನ್ನು ಕೆರಳಿಸುತ್ತಿದೆಯೆಂದು ಆರೋಪಿಸಿದ್ದರಲ್ಲದೆ ತಾವು ಕೂಡ ದೇವಳ ನೆಲಸಮಗೊಳಿಸುವುದನ್ನು ವಿರೋಧಿಸುವುದಾಗಿ ಹೇಳಿದ್ದರು.
ಸುಪ್ರೀಂ ಕೋರ್ಟ್ ತನ್ನ ಮೇ 15 ರ ಆದೇಶದಲ್ಲಿ ಟ್ರಸ್ಟ್ ನಿರ್ಮಿಸಿದ ಹನುಮಾನ್ ದೇವಳ ಹಾಗೂ 19 ಅಂಗಡಿಗಳನ್ನು ನೆಲಸಮಗೊಳಿಸುವಂತೆ ಆದೇಶಿಸಿತ್ತು. ಕಟ್ಟಡಗಳನ್ನು ಒತ್ತುವರಿ ಮಾಡಿದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿತ್ತೆಂದು ರಾಜ್ಯ ಸರಕಾರ ಈ ಬಗ್ಗೆ ಅಫಿಡವಿಟ್ ಸಲ್ಲಿಸಿದ್ದ ನಂತರ ಈ ಆದೇಶ ಹೊರಬಿದ್ದಿತ್ತು. ಈ ಆದೇಶದ ನಂತರ ದೇವಳವನ್ನು ಸರಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು.