ಒಲಿಂಪಿಕ್ಸ್‌ಗೆ ತೆರಳುವ ಕ್ರೀಡಾಪಟುಗಳನ್ನು ಭೇಟಿಯಾಗಿ ಶುಭ ಕೋರಿದ ಪ್ರಧಾನಿ

Update: 2016-07-04 13:57 GMT

ಹೊಸದಿಲ್ಲಿ,ಜು.4: ಪ್ರಧಾನಿ ನರೇಂದ್ರ ಮೋದಿ ಅವರು ಬ್ರಾಝಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತೀಯ ಕ್ರೀಡಾಪಟುಗಳನ್ನು ಸೋಮವಾರ ಭೇಟಿಯಾಗಿ ಶುಭ ಕೋರಿದರು.

ಇಲ್ಲಿಯ ಮಾಣೆಕ್ ಶಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿಯವರು ಕ್ರೀಡಾಪಟುಗಳೊಂದಿಗೆ ವ್ಯಕ್ತಿಗತವಾಗಿ ಸಂವಾದ ನಡೆಸಿದರಲ್ಲದೆ,ಆ.5ರಿಂದ 21ರವರೆಗೆ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಗೆಲುವು ನಿಮ್ಮದಾಗಲಿ ಎಂದು ಹಾರೈಸಿದರು.

ಕ್ರೀಡಾ ಸಚಿವ ಜಿತೇಂದ್ರ ಸಿಂಗ್, ಕ್ರೀಡಾ ಕಾರ್ಯದರ್ಶಿ ರಾಜೀವ ಯಾದವ, ಅಖಿಲ ಭಾರತ ಕ್ರೀಡಾ ಮಂಡಳಿಯ ಅಧ್ಯಕ್ಷ ವಿಜಯ ಮಲ್ಹೋತ್ರಾ,ಭಾರತೀಯ ಒಲಿಂಪಿಕ್ ಸಂಘ(ಐಒಎ)ದ ಅಧ್ಯಕ್ಷ ಎನ್.ರಾಮಚಂದ್ರನ್,ಹಾಕಿ ಇಂಡಿಯಾದ ಅಧ್ಯಕ್ಷ ನರೀಂದರ್ ಬಾತ್ರಾ ಮತ್ತು ಮಹಾ ಕಾರ್ಯದರ್ಶಿ ಮೊಹಮ್ಮದ್ ಮುಷ್ತಾಕ್ ಅಹ್ಮದ್ ಮತ್ತಿತರ ಗಣ್ಯರು ಸಮಾರಂಂಭದಲ್ಲಿ ಪಾಲ್ಗೊಂಡಿದ್ದರು.

ಭಾರತವು ಈ ವರ್ಷದ ಒಲಿಂಪಿಕ್ಸ್‌ಗೆ ತನ್ನ ಈವರೆಗಿನ ಅತ್ಯಂತ ದೊಡ್ಡ ತಂಡವನ್ನು ಕಳುಹಿಸಲಿದೆ. ಈಗಾಗಲೇ 13 ಕ್ರೀಡಾ ವಿಭಾಗಗಳಲ್ಲಿ 100ಕ್ಕೂ ಅಧಿಕ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆಯನ್ನು ಗಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರೀಡಾಪಟುಗಳು ಅರ್ಹತೆಯನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. 110ಕ್ಕೂ ಹೆಚ್ಚಿನ ಕ್ರೀಡಾಪಟುಗಳು ದೇಶವನ್ನು ಪ್ರತಿನಿಧಿಸಲಿದ್ದಾರೆ ಎಂದು ಕ್ರೀಡಾ ಸಚಿವಾಲಯ ಮತ್ತು ಐಒಎ ನಿರೀಕ್ಷಿಸಿವೆ. 2012ರ ಲಂಡನ್ ಒಲಿಂಪಿಕ್ಸ್‌ಗೆ ಭಾರತವು ಕಳುಹಿಸಿದ್ದ 83 ಕ್ರೀಡಾಪಟುಗಳ ತಂಡ ಈವರೆಗಿನ ದೊಡ್ಡ ತಂಡವಾಗಿತ್ತು.

 ಶೂಟರ್‌ಗಳಾದ ಜಿತು ರಾಯ್, ಮಾನವಜಿತ ಸಿಂಗ್ ಮತ್ತು ಹೀನಾ ಸಿಧು, ಬ್ಯಾಡ್ಮಿಂಟನ್ ಆಟಗಾರರಾದ ಪಿ.ವಿ.ಸಿಂಧು ಮತ್ತು ಕೆ.ಶ್ರೀಕಾಂತ್,ಬಾಕ್ಸರ್ ಶಿವ ಥಾಪಾ, ದೂರ ಅಂತರ ಓಟಗಾರರಾದ ಸುಧಾ ಸಿಂಗ್ ಮತ್ತು ಲಲಿತಾ ಬಾಬರ್ ಪ್ರಧಾನಿಯವರು ಭೇಟಿಯಾದ ಕ್ರೀಡಾಪಟುಗಳಲ್ಲಿ ಸೇರಿದ್ದರು.

ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿರುವ ಹಲವಾರು ಕ್ರೀಡಾಪಟುಗಳು ವಿದೇಶದಲ್ಲಿ ತರಬೇತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದಿನ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News