ಭ್ರಷ್ಟಾಚಾರ ಪ್ರಕರಣದಲ್ಲಿ ಕೇಜ್ರಿವಾಲರ ಪ್ರಧಾನ ಕಾರ್ಯದರ್ಶಿ ಸಹಿತ ಐವರ ಬಂಧನ

Update: 2016-07-04 14:56 GMT

ಹೊಸದಿಲ್ಲಿ, ಜು.4: ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಹಾಗೂ ಇತರ ನಾಲ್ವರನ್ನು ರೂ. 50 ಕೋಟಿಗಳ ಭಷ್ಟಾಚಾರ ಪ್ರಕರಣದ ಆರೋಪದಲ್ಲಿ ಸೋಮವಾರ ಸಂಜೆ ಸಿಬಿಐ ಬಂಧಿಸಿದೆ.

ಸಿಬಿಐ ಕಳೆದ ವರ್ಷ ಡಿಸೆಂಬರ್‌ನಲ್ಲಿ ದಿಲ್ಲಿ ವಿಧಾನಸಭೆಯಲ್ಲಿರುವ ರಾಜೇಂದ್ರ ಕುಮಾರ್‌ರ ಕಚೇರಿಯ ಮೇಲೆ ದಾಳಿ ನಡೆಸಿತ್ತು.

ಅವರ ವಿರುದ್ಧ ಲಂಚ ಹಾಗೂ ಅಧಿಕಾರ ದುರ್ಬಳಕೆಯ ಆರೋಪಗಳಿವೆ. ಹೆಚ್ಚಿನ ತನಿಖೆ ನಡೆಯುತ್ತಿದೆಯೆಂದು ಸಿಬಿಐ ವಕ್ತಾರ ಆರ್.ಕೆ.ಗೌರ್ ತಿಳಿಸಿದ್ದಾರೆ.

ರಾಜೇಂದ್ರ ಕುಮಾರ್ ವಿರುದ್ಧ ‘ಉಪಾಕಾರಕ್ಕೆ ಪ್ರತ್ಯುಪಕಾರ’ ಮಾಡಿದ ಕುರಿತು ಬಲವಾದ ಸಾಕ್ಷವಿದೆ. ಎಲ್ಲ ಐವರು ಆರೋಪಿಗಳನ್ನು ಮಂಗಳವಾರ ಪಾಟಿಯಾಲ ಹೌಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ತರ ನಾಲ್ವರು ಬಂಧಿತರನ್ನು ತರುಣ್ ಶರ್ಮಾ (ವಿಎಟಿ ಇಲಾಖೆಯ ಆಗಿನ ಸಹಾಯಕ ನಿರ್ದೇಶಕ), ಸಂದೀಪ್ ಕುಮಾರ್ (ರಾಜೇಂದ್ರ ಕುಮಾರ್‌ರ ಮುಖವಾಡ ಕಂಪೆನಿಯೊಂದರ ಮಾಲಕ), ದಿನೇಶ್ ಗುಪ್ತಾ ಹಾಗೂ ಅಶೋಕ್ ಕುಮಾರ್ ಎಂದು ಗುರುತಿಸಲಾಗಿದೆ.

ರಾಜೇಂದ್ರ ಕುಮಾರ್ 2007ರಿಂದ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿ ಎಂಡೀವರ್ ಸಿಸ್ಟಂ ಪ್ರೈ. ಲಿ. ಎಂಬ ಕಂಪೆನಿಯನ್ನು ಪ್ರಾಯೋಜಿಸುತ್ತಿದ್ದರು ಹಾಗೂ ಕಂಪೆನಿಗೆ ರೂ. 9.5 ಕೋಟಿಗಳ ಟೆಂಡರ್ ಪಡೆಯಲು ಅನುಕೂಲ ಕಲ್ಪಿಸಿದರೆಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಈ ಬಂಧನಗಳ ಸ್ವಲ್ಪ ಬಳಿಕ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ದಿಲ್ಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಕೇಂದ್ರ ಸರಕಾರವೀಗ ಅತ್ಯಂತ ಕೆಳಮಟ್ಟಕ್ಕಿಳಿದಿದೆ. ಇದೆಲ್ಲವೂ ಒಂದು ಪಿತೂರಿಯಾಗೆ. ಮುಖ್ಯಮಂತ್ರಿ ಕಚೇರಿಯ ಹಾಳು ಮಾಡಲು ಇದೆಲ್ಲವನ್ನೂ ಮಾಡಲಾಗಿದೆಯೆಂದು ಆರೋಪಿಸಿದ್ದಾರೆ.

ಇದೇ ವೇಳೆ, ಬಿಜೆಪಿ ವಕ್ತಾರ ಸುಧಾಯ ಮಿತ್ತಲ್, ಎಎಪಿಯದು ತೋಳದ ಕೂಗು ಎಂದು ಟೀಕಿಸಿದ್ದು, ಪಕ್ಷದಲ್ಲಿ ಕಳ್ಳರೇ ತುಂಬಿದ್ದಾರೆಂದು ಹೇಳಿದ್ದಾರೆ.

ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ರ ಕಚೇರಿಗೆ ಸಿಬಿಐ, 2015ರ ಡಿ.15ರಂದು ದಾಳಿ ನಡೆಸಿತ್ತು. ಆ ಬಳಿಕ ಈ ವಿಚಾರ ಕೇಜ್ರಿವಾಲ್ ಸರಕಾರ ಹಾಗೂ ಕೇಂದ್ರದ ನಡುವೆ ವಿವಾದದ ವಿಷಯವಾಗಿತ್ತು.

ದಾಳಿಯ ಬಳಿಕ ಕೇಂದ್ರದ ವಿರುದ್ಧ ಕಿಡಿಗಾರಿದ್ದ ಕೇಜ್ರಿವಾಲ್, ಡಿಡಿಸಿಎ ಹಗರಣದಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ರಕ್ಷಿಸುವುದಕ್ಕಾಗಿ ಅದು ಈ ರೀತಿ ಮಾಡಿದೆಯೆಂದು ದೂರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News