ಕುಮಟಾ: ಸಾಮೂಹಿಕ ಆತ್ಮಹತ್ಯೆಗೆ ಮುಂದಾದ 19 ಮೀನುಗಾರ ಕುಟುಂಬಗಳು
ಕಾರವಾರ, ಜು.6: ಕಳ್ಳಭಟ್ಟಿ ವಿರೋಧಿಸಿದ್ದಕ್ಕೆ ಸಾಮಾಜಿಕ ಬಹಿಷ್ಕಾರದ ಶಿಕ್ಷೆ ಎದುರಿಸಿ, ಹತಾಶವಾಗಿರುವ ಕುಮಟಾದ 19 ಮೀನುಗಾರ ಕುಟುಂಬಗಳು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ ನೀಡಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಗೂಡುಕಾಗಲ ಗ್ರಾಮದ ಮೀನುಗಾರರು ಈ ಎಚ್ಚರಿಕೆ ನೀಡಿದ್ದಾರೆ. ನಮ್ಮ ಪ್ರದೇಶದಲ್ಲಿ ಸುಮಾರು 75 ಗ್ರಾಮಗಳಿವೆ. ಇದು ಅಷ್ಟೊಂದು ದೊಡ್ಡ ಪ್ರದೇಶವಲ್ಲದಿದ್ದರೂ, ಅಕ್ರಮ ಕಳ್ಳಭಟ್ಟಿ ಸಾರಾಯಿ ದಂಧೆ ಮಾತ್ರ ವ್ಯಾಪಕವಾಗಿ ಬೆಳೆದಿದ್ದು, ಗ್ರಾಮದ ಯುವಸಮುದಾಯಕ್ಕೆ ಮಾರಕವಾಗಿ ಪರಿಣಮಿಸಿದೆ. ಹಲವು ಮಂದಿ ಮದ್ಯದ ದಾಸರಾಗುತ್ತಿದ್ದಾರೆ. ಈ ಸಮಸ್ಯೆ ಬಗ್ಗೆ ಸ್ಥಳೀಯ ಪೊಲೀಸರ ಜೊತೆಗೂ ಚರ್ಚಿಸಲಾಗಿದೆ. ಇದು ಕಳ್ಳಭಟ್ಟಿ ತಯಾರಕರನ್ನು ಕೆರಳಿಸಿದ್ದು, ಜಾತಿ ಪಂಚಾಯ್ತಿ ಕರೆದರು. ಅಲ್ಲಿ ನನ್ನ ನಿಲುವನ್ನು ನಾನು ಸಮರ್ಥಿಸಿಕೊಂಡ ಹಿನ್ನೆಲೆಯಲ್ಲಿ ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಯಿತು.
ಇದೀಗ ಬಾವಿಯಿಂದ ನೀರೆತ್ತಲು ಕೂಡಾ ನಮಗೆ ಬಿಡುತ್ತಿಲ್ಲ. ನಮ್ಮ ಕುಟುಂಬದ ಸಮಾರಂಭಗಳಲ್ಲಿ ಯಾರೂ ಭಾಗವಹಿಸುತ್ತಿಲ್ಲ. ನಮ್ಮ 19 ಕುಟುಂಬಗಳಲ್ಲಿ ಸಾವು ಸಂಭವಿಸಿದಾಗ ಕೂಡಾ ಯಾರೂ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಜಿಮ್ ಮಾಲಕರಾದ ಶಿವು ಹರಿಕಂತ್ರ ವಿವರಿಸಿದರು.
ಈ ಜಾತಿ ಪಂಚಾಯ್ತಿಯ ಪಂಚರಾದ ಜತ್ತಿ, ದೇವು, ವೆಂಕಟರಮಣ, ಮೂರ್ತಿ ಹಾಗೂ ಮಂಜುನಾಥ್ ಈ ಬಹಿಷ್ಕಾರ ಹಾಕಿದ್ದಾರೆ ಎಂದು ಅವರು ಹೇಳಿದರು.
ಪ್ರತಿದಿನ ಕುಮಟಾಕ್ಕೆ ಪ್ರಯಾಣಿಸುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀಕ್ಷಕಿ ಇಂದಿರಾ ಹರಿಕಂತ್ರ ಹೇಳುವಂತೆ, ಬಸ್ಸಿನಲ್ಲಿ ನನ್ನ ಸೀಟಿನ ಪಕ್ಕದಲ್ಲಿ ನಮ್ಮ ಗ್ರಾಮದ ಯಾರೂ ಕೂರುತ್ತಿಲ್ಲ. ಅಂತೆಯೇ ಗ್ರಾಮದ ತಮ್ಮ ಸ್ವಜಾತಿ ಬಾಂಧವರ ಪಕ್ಕದಲ್ಲಿ ಕೂರಲು ಅವಕಾಶವನ್ನೂ ಕೊಡುವುದಿಲ್ಲ. ಈ ಬಗ್ಗೆ ಕುಮಟಾ ಪೊಲೀಸರಿಗೆ ದೂರು ನೀಡಿದ್ದರೂ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಏಕೆಂದರೆ ಜಾತಿ ಪಂಚಾಯ್ತಿಯ ರಾಜಕೀಯ ಸಂಬಂಧದ ಬಗ್ಗೆ ಅವರಿಗೆ ಭೀತಿ ಇದೆ. ಕಳೆದ ಐದು ವರ್ಷಗಳಿಂದ ನಾವು ಎದುರಿಸುತ್ತಿರುವ ಕಿರುಕುಳ ಹಾಗೂ ತೊಂದರೆಯನ್ನು ಬೇರೆಯವರು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಕಳೆದ 24 ವರ್ಷಗಳಿಂದ ಪಂಚಾಯತ್ ಸದಸ್ಯನಾಗಿ ಆಯ್ಕೆಯಾಗುತ್ತಿದ್ದೇನೆ. ನಾನು ಮಾಡಿದ ಏಕೈಕ ತಪ್ಪು. ಎಂದರೆ ಬಹಿಷ್ಕೃತ ಕುಟುಂಬಗಳ ಸದಸ್ಯರ ಜತೆ ಮಾತನಾಡಿದ್ದು ಎಂದು ದಾಸು ಹರಿಕಂತ್ರ ವಿವರಿಸಿದರು.
ತಕ್ಷಣ ಆಡಳಿತ ತಮ್ಮ ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ, ಬಹಿಷ್ಕಾರಕ್ಕೆ ಒಳಗಾಗಿರುವ ಎಲ್ಲ 19 ಕುಟುಂಬಗಳೂ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.