ಝಾಕಿರ್ ನಾಯ್ಕ್ ವಿರುದ್ಧ ಎನ್‌ಐಎ ತನಿಖೆ ?

Update: 2016-07-06 12:16 GMT

ಹೊಸದಿಲ್ಲಿ, ಜು.6: ಢಾಕಾ ದಾಳಿಕೋರರಲ್ಲಿಬ್ಬರೆಂದು ಹೆಸರಿಸಲಾಗಿರುವ ನಿಬ್ರಾಸ್ ಇಸ್ಲಾಂ ಹಾಗೂ ರೋಹನ್ ಇಮ್ತಿಯಾಝ್ ಮುಂಬೈ ಮೂಲದ ಖ್ಯಾತ ವಿದ್ವಾಂಸ ಡಾ.ಝಾಕೀರ್ ನಾಯ್ಕ್ ರಿಂದ  ಪ್ರೇರಿತರಾಗಿದ್ದರೆಂದು ವದಂತಿಗಳು ಹಬ್ಬಿರುವ ಹಿನ್ನೆಲೆಯಲ್ಲಿ  ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು  ಝಾಕಿರ್ ನಾಯ್ಕ್ ನೀಡಿರುವ ಭಾಷಣಗಳು ಹಾಗೂ ಅವರ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಲು ಆರಂಭಿಸಿದೆ.

ಎನ್‌ಐಎ ಈಗಾಗಲೇ ತನ್ನ ಅಧಿಕಾರಿಗಳಿಗೆ ಝಾಕಿರ್ ನಾಯ್ಕ್ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಹೇಳಿದ್ದು ಇವುಗಳ ಆಧಾರದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ಟೈಮ್ಸ್ ಆಫ್ ಇಂಡಿಯಾದ ವರದಿಯೊಂದು ತಿಳಿಸಿದೆ.

ಝಾಕಿರ್ ನಾಯ್ಕ್ ಮುಸ್ಲಿಮರಲ್ಲಿ ಸಾಕಷ್ಟು ಜನಪ್ರಿಯರಾಗಿರುವುದರಿಂದ ಏಜನ್ಸಿ ಎಚ್ಚರಿಕೆಯಿಂದ ಹೆಜ್ಜೆಯಿಡುತ್ತಿದೆಯೆಂದು ಹೇಳಲಾಗಿದೆ.

ಪ್ರಸಕ್ತ ಉಮ್ರಾ ಯಾತ್ರೆ ಕೈಗೊಂಡು ಸೌದಿ ಅರೇಬಿಯದಲ್ಲಿರುವ ಝಾಕಿರ್ ನಾಯ್ಕ್ ಹಿಂದಿರುಗಿದೊಡನೆ ಅವರೊಂದಿಗೆ ಎನ್‌ಐಎ ಅಧಿಕಾರಿಗಳು ಸಂಪರ್ಕ ಸಾಧಿಸುವ ಸಾಧ್ಯತೆಯಿದೆಯೆನ್ನಲಾಗಿದೆ.

ತನ್ನ ‘ಪೀಸ್ ಟಿವಿ’ ಸಂದೇಶಗಳಿಂದ ಝಾಕಿರ್ ಬಾಂಗ್ಲಾದೇಶದಲ್ಲಿ ಬಹಳಷ್ಟು ಜನಪ್ರಿಯರಾಗಿದ್ದಾರೆ. ಬಾಂಗ್ಲಾದೇಶದ ದೈನಿಕವೊಂದರಲ್ಲಿ ವರದಿಯಾದಂತೆ ಢಾಕಾ ದಾಳಿಕೋರರಲ್ಲೊಬ್ಬದ ಅವಾಮಿ ಲೀಗ್ ನಾಯಕರ ಪುತ್ರ ರೋಹನ್ ಇಮ್ತಿಯಾಝ್ ಕಳೆದ ವರ್ಷ ಫೇಸ್ ಬುಕ್ ಅಭಿಯಾನವೊಂದರಲ್ಲಿ ಝಾಕಿರ್ ಹೇಳಿಕೆಯನ್ನು ಉಲ್ಲೇಖಿಸಿದ್ದನೆಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News