21 ರಾಜ್ಯಗಳಲ್ಲಿ ಗುಜರಾತ್‌ಗೆ 20ನೆ ಸ್ಥಾನ
ಅಹ್ಮದಾಬಾದ್, ಜು.7: ಗುಜರಾತ್ ಸರಕಾರ ಕನ್ಯಾ ಕೇಲವಾನಿ ಹೆಣ್ಣುಮಕ್ಕಳ ಶಾಲಾ ದಾಖಲಾತಿ ಯೋಜನೆ ಬಗ್ಗೆ ಬೆನ್ನು ತಟ್ಟಿಕೊಳ್ಳಬಹುದು. ಆದರೆ ಹೆಣ್ಣುಮಕ್ಕಳ ಶಿಕ್ಷಣ ವಿಚಾರದಲ್ಲಿ ಈ ರಾಜ್ಯ ದೇಶದ ಇತರ ರಾಜ್ಯಗಳಿಗಿಂತ ತೀರಾ ಹಿಂದಿರುವುದನ್ನು ಇತ್ತೀಚಿನ ವರದಿ ಬಹಿರಂಗಪಡಿಸಿದೆ.
2014ರ ಮಾದರಿ ನೋಂದಣಿ ವ್ಯವಸ್ಥೆ ಮೂಲ ಸಮೀಕ್ಷೆಯ ವರದಿ ಪ್ರಕಾರ, ಗುಜರಾತ್‌ನಲ್ಲಿ ಶೇಕಡ 73.4ರಷ್ಟು ಹೆಣ್ಣುಮಕ್ಕಳು ಮಾತ್ರ ಶಾಲೆಗೆ ಸೇರ್ಪಡೆಯಾಗಿದ್ದು, ದೇಶದ 21 ಪ್ರಮುಖ ರಾಜ್ಯಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣದಲ್ಲಿ ಗುಜರಾತ್ 20ನೆ ಸ್ಥಾನದಲ್ಲಿದೆ. ಕೇವಲ 72.1 ಶೇಕಡ ಹೆಣ್ಣುಮಕ್ಕಳ ಶಾಲಾ ದಾಖಲಾತಿ ಮಾಡಿಕೊಂಡಿರುವ ರಾಜಸ್ಥಾನ ಮಾತ್ರ ಗುಜರಾತ್‌ಗಿಂತ ಹಿಂದಿದೆ.
ಈ ಸಮೀಕ್ಷೆಯ ಪ್ರಕಾರ ಗುಜರಾತ್‌ನಲ್ಲಿ 15 ರಿಂದ 17ರ ವಯೋಮಿತಿಯ ಶೇಕಡ 26.6ರಷ್ಟು ಹೆಣ್ಣುಮಕ್ಕಳು ಶಾಲೆ ಬಿಟ್ಟಿದ್ದಾರೆ ಅಥವಾ ಶಾಲೆಯ ಮೆಟ್ಟಲು ಹತ್ತಿಲ್ಲ. ಅಂದರೆ ಇಷ್ಟು ಪ್ರಮಾಣದ ಬಾಲಕಿಯರು 9 ಅಥವಾ 10ನೆ ತರಗತಿ ತಲುಪಿಲ್ಲ.
ಹೆಣ್ಣುಮಕ್ಕಳ ಶಾಲಾ ದಾಖಲಾತಿಯ ರಾಷ್ಟ್ರೀಯ ಸರಾಸರಿ ಶೇಕಡ 83.8ರಷ್ಟಿದ್ದು, ಗುಜರಾತ್ ಈ ಸರಾಸರಿಗಿಂತ ಶೇಕಡ 10ರಷ್ಟು ಹಿಂದಿದೆ. ಈ ಸಮೀಕ್ಷೆ ನಡೆಸಿದಾಗ, ಹೆಣ್ಣುಮಕ್ಕಳ ಶಾಲಾ ದಾಖಲಾತಿಗೆ ಗುಜರಾತ್ ಸರಕಾರ ಕೈಗೊಂಡ ಯೋಜನೆ ಆರಂಭವಾಗಿ ಹತ್ತು ವರ್ಷ ಕಳೆದಿದೆ. ಕನ್ಯಾ ಕೇಲವಾನಿ ಕಾರ್ಯಕ್ರಮದ ಅಂಗವಾಗಿ ಶಾಲಾ ಪ್ರವೇಶೋತ್ಸವ ಆಯೋಜಿಸಲಾಗುತ್ತಿದ್ದು, ಇದರಲ್ಲಿ ಸಚಿವರು ಹಾಗೂ ಸರಕಾರದ ಅಧಿಕಾರಿಗಳು ಗ್ರಾಮೀಣ ಶಾಲೆಗಳಿಗೆ ತೆರಳಿ, ಹೆಣ್ಣುಮಕ್ಕಳ ದಾಖಲಾತಿಯನ್ನು ಖಚಿತಪಡಿಸುತ್ತಾರೆ. ಇಷ್ಟಾಗಿಯೂ ಇತರ ಹಲವು ಹಿಂದುಳಿದ ರಾಜ್ಯಗಳು ಗುಜರಾತ್‌ಗಿಂತ ಉತ್ತಮ ಸಾಧನೆ ಮಾಡಿವೆ.
ಬಿಹಾರದಲ್ಲಿ 15-17 ವಯೋಮಿತಿಯ ಶೇಕಡ 83.3ರಷ್ಟು ಬಾಲಕಿಯರು ಶಾಲೆಗೆ ತೆರಳುತ್ತಿದ್ದಾರೆ. ಅಸ್ಸಾಂ ಹಾಗೂ ಜಾರ್ಖಂಡ್‌ನಲ್ಲಿ ಈ ಪ್ರಮಾಣ ಕ್ರಮವಾಗಿ ಶೇಕಡ 84.8 ಹಾಗೂ 84.1ರಷ್ಟಿದೆ. ಛತ್ತೀಸ್‌ಗಢದಲ್ಲಿ ಶೇಕಡ 90.1ರಷ್ಟು ಬಾಲಕಿಯರು ಶಾಲೆಗಳಲ್ಲಿದ್ದಾರೆ. ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ಒಡಿಶಾದಲ್ಲಿ ಈ ಪ್ರಮಾಣ ಅನುಕ್ರಮವಾಗಿ ಶೇಕಡ 79.2, 79.4 ಹಾಗೂ 75.3 ಆಗಿದೆ.