ದೇಶಾದ್ಯಂತ ಈದ್ ಸಂಭ್ರಮಾಚರಣೆ

Update: 2016-07-07 17:57 GMT

ಹೊಸದಿಲ್ಲಿ, ಜು.7: ಗುರುವಾರ ದೇಶಾದ್ಯಂತ ಮುಸ್ಲಿಮ್ ಬಾಂಧವರು ಈದ್-ಉಲ್-ಫಿತ್ರ್ ಅನ್ನು ಸಂಭ್ರಮದಿಂದ ಆಚರಿಸಿದರು. ಮಸೀದಿಗಳು ಮತ್ತು ಈದ್ಗಾಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದರಲ್ಲದೆ ಪರಸ್ಪರ ಶುಭಾಶಯಗಳನ್ನು ವಿನಿಮಯಿಸಿಕೊಂಡರು.

ದಿಲ್ಲಿಯಲ್ಲಿ ಜನರು ನಮಾಝ್‌ಗಾಗಿ ಐತಿಹಾಸಿಕ ಜಾಮಾ ಮಸೀದಿ,ಫತೇಪುರ ಮಸೀದಿ,ಹಝರತ್ ನಿಜಾಮುದ್ದೀನ್ ಮತ್ತು ಇತರ ಮಸೀದಿಗಳಲ್ಲಿ ಸಮಾವೇಶಗೊಂಡು ಪರಸ್ಪರ ಈದ್ ಮುಬಾರಕ್'ಹಾರೈಸಿದರಲ್ಲದೆ, ಉಡುಗೊರೆಗಳನ್ನು ವಿನಿಮಯಿಸಿಕೊಂಡರು.
ಜಾಮಾ ಮಸೀದಿ ಮತ್ತು ಚಾಂದನಿ ಚೌಕ್‌ಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು. ಸ್ನೇಹಿತರು ಮತ್ತು ಬಂಧುಗಳ ಸ್ವಾಗತಕ್ಕಾಗಿ ಸಿಹಿತಿಂಡಿಗಳು ಮತ್ತು ಇತರ ಖಾದ್ಯಗಳ ಖರೀದಿಯಲ್ಲಿ ಜನರು ವ್ಯಸ್ತರಾಗಿದ್ದರು. ಹೆತ್ತವರು ಮತ್ತು ಹಿರಿಯರಿಂದ 'ಈದೀ(ಹಣ)' ಪಡೆದಿದ್ದ ಮಕ್ಕಳಂತೂ ಉತ್ಸಾಹದಿಂದ ಆಟಿಕೆಗಳು ಮತ್ತು ಇತರ ವಸ್ತುಗಳ ಖರೀದಿಯಲ್ಲಿ ತೊಡಗಿಕೊಂಡಿದ್ದರು.

ಜನರು ಮಸೀದಿಗಳು ಮತ್ತು ಈದ್ಗಾ ಮೈದಾನಗಳ ಬಳಿ ಸೇರಿದ್ದ ಬಡವರಿಗೆ ಧನಸಹಾಯವನ್ನೂ ನೀಡಿದರು. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಪ್ರದೇಶಗಳಲ್ಲಿ ಮಾರುಕಟ್ಟೆಗಳು ಹಬ್ಬಕ್ಕಾಗಿ ಸಂಪೂರ್ಣ ಸಜ್ಜಾಗಿದ್ದವು. ದೇಶಾದ್ಯಂತ,ವಿಶೇಷವಾಗಿ ದೊಡ್ಡ ಪ್ರಮಾಣದ ಪ್ರಾರ್ಥನಾ ಸಮಾವೇಶಗಳಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಏರ್ಪಡಿಸಲಾಗಿತ್ತು. ಕರ್ನಾಟಕದ ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ, ಜಮ್ಮು-ಕಾಶ್ಮೀರ ಮತ್ತು ಕೇರಳದಲ್ಲಿ ಬುಧವಾರ ಈದ್ ಆಚರಿಸಲಾಯಿತು.
ಈದ್ ಸಂದರ್ಭದಲ್ಲಿ ಜನತೆಗೆ ಶುಭಾಶಯಗಳನ್ನು ಕೋರಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಈದ್ ಪ್ರೀತಿ ಮತ್ತು ವಿಶ್ವ ಭ್ರಾತೃತ್ವದ ಮಾರ್ಗದಲ್ಲಿ ನಡೆಯಲು ಎಲ್ಲರಿಗೂ ಸ್ಫೂರ್ತಿ ನೀಡಲಿದೆ ಮತ್ತು ಸಮಾಜದಲ್ಲಿ ಸೌಹಾರ್ದತೆ ಮತ್ತು ಶಾಂತಿಯನ್ನು ಹೆಚ್ಚಿಸಲಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಹಲವರು ರಾಜ್ಯಗಳ ಮುಖ್ಯಮಂತ್ರಿಗಳು ಈದ್‌ನ ವಿಶೇಷ ಪ್ರಾರ್ಥನೆಗಳಲ್ಲಿ ಪಾಲ್ಗೊಂಡು ಜನತೆಗೆ ಶುಭಾಶಯಗಳನ್ನು ಕೋರಿದರು. ಬಾಲಿವುಡ್ ತಾರೆಯರೂ ಸಾಮಾಜಿಕ ಮಾಧ್ಯಮಗಳ ಮೂಲಕ ಈದ್ ಶುಭಾಶಯಗಳನ್ನು ಕೋರಿದರು.
 ಉತ್ತರ ಪ್ರದೇಶದ ಲಕ್ನೋದಲ್ಲಿ ಇದೇ ಮೊದಲಬಾರಿಗೆ ಐಷಬಾಗ್ ಈದ್ಗಾದಲ್ಲಿ ಮಹಿಳೆಯರು ನಮಾಝ್ ಸಲ್ಲಿಸಿದರು. ಜೀವನದ ಎಲ್ಲ ರಂಗಗಳಲ್ಲಿಯ ಮುಸ್ಲಿಮರು ನಮಾಝ್ ಸಲ್ಲಿಸಲು ಮಸೀದಿಗಳು ಮತ್ತು ಈದ್ಗಾಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ರಾಜ್ಯಪಾಲ ರಾಮ ನಾಯಕ್ ಮತ್ತು ಮುಖ್ಯಮಂತ್ರಿ ಅಖಿಲೇಶ ಯಾದವ ಅವರು ಜನತೆಗೆ ಈದ್ ಶುಭಾಶಯಗಳನ್ನು ಕೋರಿದರು.
ಭಾರತ ಮತ್ತು ಪಾಕಿಸ್ತಾನದ ನಡುವಿನ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಹಲವಾರು ಸ್ಥಳಗಳಲ್ಲಿ ಬಿಎಸ್‌ಎಫ್ ಮತ್ತು ಪಾಕಿಸ್ತಾನ ರೇಂಜರ್ಸ್ ಪರಸ್ಪರ ಶುಭಾಶಯಗಳನ್ನು ಕೋರಿ ಸಿಹಿಗಳನ್ನು ವಿನಿಮಯಿಸಿಕೊಂಡರು.
ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಈದ್ ದುರಂತವೊಂದಕ್ಕೂ ಸಾಕ್ಷಿಯಾಯಿತು. ನಮಾಝ್ ಸಲ್ಲಿಸಲು ಜನರು ನೆರೆದಿದ್ದ ಮೈದಾನದಲ್ಲಿ ಸೆಪ್ಟಿಕ್ ಟ್ಯಾಂಕ್ ಕುಸಿದು 10ರ ಹರೆಯದ ಬಾಲಕ ಮೃತಪಟ್ಟಿದ್ದು, ಇತರ ಆರು ಜನರು ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News