ಇಕ್ಕಟ್ಟಿನಲ್ಲಿ ನೂತನ ಎಚ್‌ಆರ್‌ಡಿ ಸಚಿವ ಜಾವಡೇಕರ್

Update: 2016-07-07 18:03 GMT

ಹೊಸದಿಲ್ಲಿ, ಜು.7: ಕೇಂದ್ರ ಮಾನವ ಸಂಪನ್ಮೂಲ ಖಾತೆಯ ನೂತನ ಸಚಿವ ಗದ್ದುಗೆ ಏರುತ್ತಿದ್ದಂತೆಯೇ ವಿವಾದದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರ ಪತ್ನಿ ಖಾಸಗಿ ಶೈಕ್ಷಣಿಕ ಸಲಹಾ ಕಂಪೆನಿ ನಡೆಸುತ್ತಿರುವುದು ವಿವಾದದ ಮೂಲ. ಈ ಮೂಲಕ ನೂತನ ಸಚಿವರು ಹಿತಾಸಕ್ತಿ ಸಂಘರ್ಷದ ಸುಳಿಗೆ ಸಿಕ್ಕಿದ್ದಾರೆ.

ಜಾವಡೇಕರ್ ಪತ್ನಿ ಪ್ರಾಚಿ ಜಾವಡೇಕರ್, ಪುಣೆಯಲ್ಲಿ ಜಾವಡೇಕರ್ ಶೈಕ್ಷಣಿಕ ಸಲಹಾ ಸೇವೆ ಎಂಬ ಖಾಸಗಿ ನೋಂದಾಯಿತ ಕಂಪೆನಿಯ ಮಾಲಕರು. ಇದರ ಅಧಿಕೃತ ಬಂಡವಾಳ ಒಂದು ಲಕ್ಷ ರೂಪಾಯಿ ಆಗಿದೆ. 2010ರಲ್ಲಿ ಜೆಇಸಿಎಸ್ ಕಂಪೆನಿ ಆರಂಭವಾಗಿದ್ದು, ಪ್ರಾಚಿ ಜಾವಡೇಕರ್ ಹಾಗೂ ಶ್ಯಾಮ್ ಸದಾಶಿವ ವಾಘ್ ಇದರ ನಿರ್ದೇಶಕರು. ಇದು ಶೈಕ್ಷಣಿಕ ಸಂಸ್ಥೆಗಳಿಗೆ ಸಲಹೆ ನೀಡುವ ಅಗ್ರಗಣ್ಯ ಶೈಕ್ಷಣಿಕ ಸಲಹಾ ಕಂಪೆನಿಗಳಲ್ಲೊಂದಾಗಿದೆ. ಇದು ಕಲಿಕಾ ಮಾದರಿಗಳ ತಯಾರಿಕಾ ಕಂಪೆನಿಯಾಗಿದ್ದು, ಶೈಕ್ಷಣಿಕ ವ್ಯವಸ್ಥೆಯಲ್ಲಿ ಆಗುತ್ತಿರುವ ಕ್ಷಿಪ್ರ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಇದಕ್ಕೆ ವಿಶೇಷ ಮಹತ್ವ ಇದೆ.
ವ್ಯವಸ್ಥಾಪನಾ ಶಿಕ್ಷಣದ ತಜ್ಞೆಯಾಗಿರುವ ಪ್ರಾಚಿ ಈ ಮುನ್ನ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಹಾಗೂ ಇತರ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಸಕ್ರಿಯರಾಗಿದ್ದರು. ಇದನ್ನು ಹೇಗೆ ನಿಭಾಯಿಸುತ್ತೀರಿ ಎಂದು ಜಾವಡೇಕರ್ ಅವರನ್ನು ಪ್ರಶ್ನಿಸಿದಾಗ, ಎಐಸಿಟಿಇಯ ಒಂದು ಉಪಸಮಿತಿಯಲ್ಲಿ ಪ್ರಾಚಿ ಸದಸ್ಯರಾಗಿದ್ದರು. 2016ರ ಮೇ 16ರಂದು ಅವರ ಅಧಿಕಾರಾವಧಿ ಮುಗಿದಿದೆ. ಹಲವು ವರ್ಷಗಳಿಂದ ಶೈಕ್ಷಣಿಕ ತಜ್ಞರಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ ಯಾವ ಹಿತಾಸಕ್ತಿ ಸಂಘರ್ಷದ ಪ್ರಶ್ನೆಯೂ ಉದ್ಭವಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ಅದಾಗ್ಯೂ ಜೆಇಸಿಎಸ್ ಬಗ್ಗೆ ಅವರು ಏನೂ ಹೇಳಲು ಇಚ್ಛಿಸಲಿಲ್ಲ. ಆದರೆ ಮೂಲಗಳ ಪ್ರಕಾರ, ನೋಂದಾಯಿತ ಕಂಪೆನಿಯ ನಿರ್ದೇಶಕ ಹುದ್ದೆಯಿಂದ ನಿರ್ಗಮಿಸಲು ಸಮಯಾವಕಾಶಬೇಕಾಗುತ್ತದೆ. ಆ ಪ್ರಕ್ರಿಯೆ ಆರಂಭವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News