ಮೋದಿ ಸಂಪುಟದ 78 ಸಚಿವರಲ್ಲಿ 72 ಜನರು ಕರೋಡ್‌ಪತಿಗಳು

Update: 2016-07-08 16:04 GMT

ಹೊಸದಿಲ್ಲಿ,ಜು.8: ಕೇಂದ್ರ ಸಚಿವ ಸಂಪುಟದ ಇತ್ತೀಚಿನ ವಿಸ್ತರಣೆಯೊಂದಿಗೆ ಅದರಲ್ಲಿದ್ದ ಕರೋಡ್‌ಪತಿಗಳ ಸಂಖ್ಯೆ 72ಕ್ಕೇರಿದೆ. ಇದೇ ವೇಳೆ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವವರ ಸಂಖ್ಯೆಯೂ 24ಕ್ಕೇರಿದೆ ಎಂದು ದಿಲ್ಲಿಯ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ನಡೆಸಿರುವ ಅಧ್ಯಯನವು ಬಹಿರಂಗಗೊಳಿಸಿದೆ.
ಕಳೆದ ವಾರ ನಡೆದ ಸಂಪುಟ ಪುನಾರಚನೆಯಲ್ಲಿ 19 ನೂತನ ಸಚಿವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದ್ದು,ಐವರನ್ನು ಕೈಬಿಡಲಾಗಿದೆ. ಇದರೊಂದಿಗೆ ಸಂಪುಟದಲ್ಲಿಯ ಸಚಿವರ ಸಂಖ್ಯೆ 78ಕ್ಕೇರಿದೆ.
ನೂತನವಾಗಿ ಸೇರ್ಪಡೆಗೊಂಡಿರುವ ಸಚಿವರು ಸರಾಸರಿ 8.73 ಕೋ.ರೂ.ವೌಲ್ಯದ ಆಸ್ತಿಗಳನ್ನು ಹೊಂದಿದ್ದು,ಇದರೊಂದಿಗೆ ಸಂಪುಟದಲ್ಲಿಯ ಎಲ್ಲ ಸಚಿವರ ಸರಾಸರಿ ಆಸ್ತಿ ಮೌಲ್ಯ 12.94 ಕೋ.ರೂ.ಗಳಾಗಿವೆ.
ನೂತನ ಸಚಿವರ ಪೈಕಿ ರಾಜ್ಯಸಭೆಯಲ್ಲಿ ಮಧ್ಯಪ್ರದೇಶವನ್ನು ಪ್ರತಿನಿಧಿಸುತ್ತಿರುವ ಎಂ.ಜೆ.ಅಕ್ಬರ್ ಗರಿಷ್ಠ ಒಟ್ಟು ಆಸ್ತಿ(44.90 ಕೋ.ರೂ.)ಯನ್ನು ಘೋಷಿಸಿದ್ದರೆ, ನಂತರದ ಸ್ಥಾನಗಳಲ್ಲಿ ರಾಜಸ್ಥಾನದಿಂದ ರಾಜ್ಯಸಭಾ ಸದಸ್ಯರಾಗಿರುವ ಪಿ.ಪಿ.ಚೌಧರಿ(35.35 ಕೋ.ರೂ.) ಮತ್ತು ವಿಜಯ ಗೋಯೆಲ್(29.97 ಕೋ.ರೂ.) ಇದ್ದಾರೆ.
 ಒಂದು ಕೋ.ರೂ.ಗೂ ಹೆಚ್ಚಿನ ಆಸ್ತಿಯನ್ನು ಹೊಂದಿರುವ ನೂತನ ಸಚಿವರಲ್ಲಿ ರಮೇಶ ಜಿಗಜಿಣಗಿ, ಪುರುಷೋತ್ತಮ ಖೋಡಾಭಾಯಿ ರುಪಾಲಾ, ಅನುಪ್ರಿಯಾ ಸಿಂಗ್ ಪಟೇಲ್, ಮಹೇಂದ್ರನಾಥ, ಫಗನ್‌ಸಿಂಗ್ ಕುಲಾಸ್ತೆ, ರಾಜೇನ್ ಗೋಹೇನ್, ಎಸ್.ಎಸ್.ಅಹ್ಲುವಾಲಿಯಾ, ಅರ್ಜುನ ರಾಮ ಮೇಘವಾಲ್, ಸಿ.ಆರ್ ಚೌಧರಿ, ಮನಸುಖಭಾಯಿ ಲಕ್ಮಣಭಾಯಿ ಮಾಂಡವೀಯ ಮತ್ತು ಕೃಷ್ಣಾ ರಾಜ್ ಅವರೂ ಸೇರಿದ್ದಾರೆ.
ಎಡಿಆರ್ ಅಧ್ಯಯನದಂತೆ 78 ಸಚಿವರ ಪೈಕಿ ವಿತ್ತ ಸಚಿವ ಅರುಣ ಜೇಟ್ಲಿ(113 ಕೋ.ರೂ.),ಆಹಾರ ಸಂಸ್ಕರಣೆ ಸಚಿವೆ ಹರಸಿಮ್ರತ್ ಕೌರ್ ಬಾದಲ್(108 ಕೋ.ರೂ.) ಮತ್ತು ವಿದ್ಯುತ್ ಸಚಿವ ಪಿಯೂಷ್ ಗೋಯೆಲ್(95 ಕೋ.ರೂ.) ಸೇರಿದಂತೆ ಒಂಬತ್ತು ಸಚಿವರು 30 ಕೋ.ರೂ.ಗೂ ಅಧಿಕ ವೌಲ್ಯದ ಆಸ್ತಿಗಳನ್ನು ಘೋಷಿಸಿದ್ದಾರೆ.
ನೂತನವಾಗಿ ಸೇರ್ಪಡೆಗೊಂಡಿರುವ ಸಚಿವರಲ್ಲಿ ಮಧ್ಯಪ್ರದೇಶದ ರಾಜ್ಯಸಭಾ ಸದಸ್ಯ ಹಾಗೂ ಹಾಲಿ ಪರಿಸರ ಸಚಿವ ಅನಿಲ ಮನೋಹರ ದವೆ ಅವರು ಅತ್ಯಂತ ಕಡಿಮೆ, 60.97 ಲ.ರೂ.ವೌಲ್ಯದ ಆಸ್ತಿಯನ್ನು ಹೊಂದಿರುವುದಾಗಿ ಘೋಷಿಸಿದ್ದಾರೆ. ಒಟ್ಟೂ ಆರು ಸಚಿವರು ಒಂದು ಕೋ.ರೂ.ಗೂ ಕಡಿಮೆ ಆಸ್ತಿಯನ್ನು ಘೋಷಿಸಿದ್ದಾರೆ.
ನೂತನವಾಗಿ ಸೇರ್ಪಡೆಗೊಂಡಿರುವ ಸಚಿವರಲ್ಲಿ ಏಳು ಜನರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದು,ಇದರೊಂದಿಗೆ ಸಂಪುಟದಲ್ಲಿ ಇಂತಹ ಸಚಿವರ ಸಂಖ್ಯೆ 24ಕ್ಕೇರಿದೆ.
ಮೂವರು ಸಚಿವರು 31ರಿಂದ 40 ವರ್ಷ ವಯಸ್ಸಿನವರಾಗಿದ್ದರೆ, 44 ಜನರು 41ರಿಂದ 60 ಮತ್ತು 31 ಸಚಿವರು 61ರಿಂದ 80 ವರ್ಷ ಪ್ರಾಯದವರಾಗಿದ್ದಾರೆ.
ಈಗ ಮೋದಿ ಸಂಪುಟದಲ್ಲಿ ಒಟ್ಟು ಒಂಬತ್ತು ಮಹಿಳಾ ಸಚಿವರಿದ್ದಾರೆ.
78 ಸಚಿವರ ಪೈಕಿ 14 ಸಚಿವರು 12 ನೇ ತರಗತಿ ಅಥವಾ ಅದಕ್ಕೂ ಕಡಿಮೆ ಹಾಗೂ 63 ಸಚಿವರು ಪದವಿ ಮತ್ತು ಅದಕ್ಕೂ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News