ಹಾರ್ದಿಕ್‌ಗೆ ಜಾಮೀನು: 6 ತಿಂಗಳು ಗುಜರಾತ್ ಪ್ರವೇಶಕ್ಕೆ ನಿರ್ಬಂಧ

Update: 2016-07-08 18:06 GMT

ಅಹ್ಮದಾಬಾದ್, ಜು.8: ಗುಜರಾತ್ ಸರಕಾರವು ದೇಶದ್ರೋಹಿಯೆಂದು ಆರೋಪಿಸಿ ಬಂಧಿಸಿದ್ದ 22ರ ಹರೆಯದ ಹಾರ್ದಿಕ್ ಪಟೇಲ್ ಕಾರಾಗೃಹದಿಂದ ಹೊರ ಬರಬಹುದು. ಆದರೆ, ಆತ 6 ತಿಂಗಳ ಕಾಲ ಗುಜರಾತ್‌ಗೆ ಕಾಲಿಡಬಾರೆದೆಂದು ಗುಜರಾತ್ ಹೈಕೋರ್ಟ್ ಆದೇಶಿಸಿದೆ.

ನ್ಯಾಯಾಲಯವು ಹಾರ್ದಿಕ್ ಪಟೇಲ್‌ನ ಜಾಮೀನು ಮನವಿಯನ್ನು ಪುರಸ್ಕರಿಸಿದೆ. ಆದರೆ, ಹಾರ್ದಿಕ್ ವಿರುದ್ಧ ಶಾಸಕನೊಬ್ಬನ ಕಚೇರಿಯಲ್ಲಿ ದಾಂಧಲೆ ನಡೆಸಿದ ಪ್ರತ್ಯೇಕ ಆರೋಪವಿರುವುದರಿಂದ ಆತ ಕಾರಾಗೃಹದಿಂದ ಹೊರ ಬರಬಹುದೇ ಎಂಬುದು ಸ್ಪಷ್ಟವಾಗಿಲ್ಲ.
ಆಳುವ ಬಿಜೆಪಿಯ ವಿರುದ್ಧ ಬಲಶಾಲಿ ಪಾಟಿದಾರ್ ಸಮುದಾಯದ ಭಾರೀ ಬಂಡಾಯದ ನೇತೃತ್ವ ವಹಿಸಿದ್ದ ಹಾರ್ದಿಕ್‌ನನ್ನು ಬಂಧಿಸಿ ಸೂರತ್‌ನ ಕಾರಾಗೃಹದಲ್ಲಿಡಲಾಗಿದೆ.
ಭಾರೀ ಜನಸಂದಣಿ ಸೇರಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ಸರಕಾರದ ವಿರುದ್ಧ ಕತ್ತಿ ಝಳಪಿಸಿದ್ದ ಹಾರ್ದಿಕ್, ಪಾಟಿದಾರ್ ಸಮುದಾಯಕ್ಕೆ ಸರಕಾರಿ ಉದ್ಯೋಗ ಹಾಗೂ ಕಾಲೇಜು ಪ್ರವೇಶದಲ್ಲಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದ್ದನು. ಪಾಟಿದಾರ್ ಅಥವಾ ಪಟೇಲ್ ಸಮುದಾಯವು ಪಾರಂಪರಿಕವಾಗಿ ಶ್ರೀಮಂತ ಸಮುದಾಯವಾಗಿದೆ. ಅದು ವಜ್ರಗಳ ವ್ಯಾಪಾರ ಹಾಗೂ ಕೃಷಿಯಿಂದ ಹೇರಳ ಸಂಪತ್ತು ಗಳಿಸಿದ್ದರೂ, ಇತ್ತೀಚೆಗೆ ಈ ವಲಯಗಳಲ್ಲಿ ಲಾಭವು ಭಾರೀ ಕಡಿಮೆಯಾಗಿದೆ.
ಗುಜರಾತ್‌ನ ಕೆಲವು ದೊಡ್ಡ ನಗರಗಳಲ್ಲಿ ಬೆಂಬಲಿಗರು ಹಿಂಸಾಚಾರ ಹಾಗೂ ಕಿಚ್ಚಿಡುವಿಕೆಯನ್ನು ಭಾರೀ ಪ್ರಮಾಣದಲ್ಲಿ ನಡೆಸಿದ್ದುದರಿಂದ ಹಾರ್ದಿಕ್‌ನನ್ನು ಬಂಧಿಸಲಾಗಿತ್ತು. ತನ್ನನ್ನು ಬಿಡುಗಡೆಗೊಳಿಸಿದರೆ ಚಳವಳಿಯನ್ನು ಶಾಂತಿಯುತವಾಗಿ ಮುಂದುವರಿಸುವ ವಾಗ್ದಾನವನ್ನು ಅವನು ನ್ಯಾಯಾಲಯಕ್ಕೆ ನೀಡಿದ್ದನು.
ಪಟೇಲ್ ಸಮುದಾಯಕ್ಕೆ ಸರಕಾರಿ ಉದ್ಯೋಗಗಳಲ್ಲಿ ಶೇ.10 ಮೀಸಲಾತಿಯನ್ನು ನೀಡುವ ಆಶ್ವಾಸನೆಯನ್ನು ಸರಕಾರ ನೀಡಿತ್ತಾದರೂ, ಸಮುದಾಯವು ಅದು ಸಾಕಾಗದೆಂದು ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News