ಅಪರಾಧ ಹೆಚ್ಚುತ್ತಿರುವ ಚೆನ್ನೈನಲ್ಲಿ ಪೊಲೀಸರು ಭಾರೀ ಬ್ಯುಝಿ

Update: 2016-07-09 03:19 GMT

ಚೆನ್ನೈ, ಜು.9: ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಚೆನ್ನೈ ನಗರದ ಪೊಲೀಸರ ಪೈಕಿ ಶೇಕಡ 3ರಷ್ಟು ಅಂದರೆ 700 ಮಂದಿ ಪೊಲೀಸರ ಕರ್ತವ್ಯ ಏನು ಗೊತ್ತೇ? ಹಿರಿಯ ಅಧಿಕಾರಿಗಳ ಮನೆಯ ಪಾತ್ರೆ ತೊಳೆಯುವುದು ಹಾಗೂ ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳ ಗೃಹಕೃತ್ಯ ನಿರ್ವಹಿಸುವುದು. ಕೆಲ ಪ್ರಕರಣಗಳಲ್ಲಂತೂ ಹಿರಿಯ ಅಧಿಕಾರಿಗಳ ಸಂಬಂಧಿಕರ ಮನೆಯಲ್ಲೂ ಪಾತ್ರೆ ತೊಳೆಯುವ ಕೆಲಸವನ್ನು ಪೊಲೀಸರು ನಿರ್ವಹಿಸುತ್ತಿದ್ದಾರೆ.!

ಇನ್ನೂ ಅಚ್ಚರಿಯ ವಿಷಯ ಏನು ಗೊತ್ತೇ? ಇದನ್ನು ಬಹಿರಂಗಪಡಿಸಿದವರು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್. ಸರಕಾರದ ಮುಖ್ಯ ಕಾರ್ಯದರ್ಶಿ ಇತ್ತೀಚೆಗೆ ನಡೆಸಿದ ಕಾನೂನು- ಸುವ್ಯವಸ್ಥೆ ಪರಾಮರ್ಶೆ ಸಬೆಯಲ್ಲಿ ಈ ವಿಷಯವನ್ನು ಕುಮಾರ್ ಬಹಿರಂಗಪಡಿಸಿದರು.

ನಗರದಲ್ಲಿ ಅಪರಾಧ ಕೃತ್ಯಗಳು ಹೆಚ್ಚುವ ಮೂಲಕ ನಗರಕ್ಕೆ ಕೆಟ್ಟ ಹೆಸರು ಬರುತ್ತಿರುವ ಬಗ್ಗೆ ಪೊಲೀಸ್ ಆಯುಕ್ತ ಟಿ.ಕೆ.ರಾಜೇಂದ್ರನ್ ಅವರು ಮಾಹಿತಿ ನೀಡಿ, ಇದಕ್ಕೆ ಸಿಬ್ಬಂದಿ ಕೊರತೆ ಕಾರಣ ಎಂದು ವಿವರಿಸಿದಾಗ, ಮಹಾನಿರ್ದೇಶಕರು, ಪೊಲೀಸ್ ಬಲ ಎಲ್ಲಿ ದುರ್ಬಳಕೆಯಾಗುತ್ತಿದೆ ಎನ್ನುವ ವಿವರ ಬಿಚ್ಚಿಟ್ಟರು.

ನಗರದಲ್ಲಿ ಹಗಲಿನಲ್ಲೇ ಕೊಲೆ, ಸುಲಿಗೆ, ಅಪಹರಣ, ಸರಗಳ್ಳತನದಂಥ ಕೃತ್ಯಗಳು ಹೆಚ್ಚುತ್ತಿವೆ. ಚೆನ್ನೈ ನಗರಕ್ಕೆ 600 ಮಂದಿ ಹೆಚ್ಚುವರಿ ಸಿಬ್ಬಂದಿ ಬೇಕು ಎಂದು ಆಯುಕ್ತರು ಆಗ್ರಹಿಸಿದಾಗ, ಮಹಾನಿರ್ದೇಶಕರು, 700 ಮಂದಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿರುವ ಬಗ್ಗೆ ವಿವರ ನೀಡಿದರು. ಆರ್ಡರ್ಲಿ ಕೆಲಸಕ್ಕೆ ಇವರನ್ನು ನಿಯೋಜಿಸಿಕೊಳ್ಳದಿದ್ದರೆ, ಸಿಬ್ಬಂದಿ ಕೊರತೆಯಾಗದು ಎಂದು ಮಹಾನಿರ್ದೇಶಕರು ಸಲಹೆ ಮಾಡಿದರು.

ಪೊಲೀಸರನ್ನು ಬಟ್ಟೆ ಒಗೆಯಲು, ಕಸ ಗುಡಿಸುವುದು ಹಾಗೂ ನೆಲ ಒರೆಸುವುದು, ಶೌಚಾಲಯ ಸ್ವಚ್ಛತೆಗೆ, ಪಾತ್ರೆ ತೊಳೆಯಲು, ಉದ್ಯಾನವನ ನಿರ್ವಹಿಸಲು ಹಾಗೂ ನಾಯಿಗಳನ್ನು ಸ್ನಾನ ಮಾಡಿಸಲು ಕೂಡಾ ಬಳಸಿಕೊಳ್ಳಲಾಗುತ್ತಿದೆ. ಆರ್ಡರ್ಲಿ ವ್ಯವಸ್ಥೆಯು ಸಾಮ್ರಾಜ್ಯಶಾಹಿ ವ್ಯವಸ್ಥೆಯ ಬಳುವಳಿಯಾಗಿದೆ. ಅದರಲ್ಲೂ ಮುಖ್ಯವಾಗಿ ಐಪಿಎಸ್ ಅಧಿಕಾರಿಗಳು ತಮ್ಮ ಅಧಿಕಾರವನ್ನು ಪ್ರದರ್ಶಿಸುವ ಸಲುವಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News