ಬಂದೂಕುಧಾರಿ ಅಮೆರಿಕದ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ

Update: 2016-07-09 16:42 GMT

ಮೆಸ್‌ಕ್ವಿಟ್ (ಟೆಕ್ಸಾಸ್), ಜು. 9: ಅಮೆರಿಕದ ಡಲ್ಲಾಸ್‌ನಲ್ಲಿ ಐವರು ಪೊಲೀಸರನ್ನು ಹತ್ಯೆಗೈದಿರುವ ಬಂದೂಕುಧಾರಿ ಮಿಕಾ ಝೇವಿಯರ್ ಜಾನ್ಸನ್ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸೇನೆಯಲ್ಲಿ ಕೆಲಸ ಮಾಡುತ್ತಿದ್ದನು ಹಾಗೂ ಮಹಿಳಾ ಸೈನಿಕರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಆತನನ್ನು ಸ್ವದೇಶಕ್ಕೆ ವಾಪಸ್ ಕಳುಹಿಸಲಾಗಿತ್ತು.
ಪೊಲೀಸ್ ಅಧಿಕಾರಿಗಳು ಕರಿಯರನ್ನು ವಿನಾ ಕಾರಣ ಕೊಲ್ಲುತ್ತಿರುವುದನ್ನು ಪ್ರತಿಭಟಿಸಿ ಡಲ್ಲಾಸ್‌ನಲ್ಲಿ ಶುಕ್ರವಾರ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ಆತ ಮರೆಯಲ್ಲಿ ನಿಂತು ಗುಂಡು ಹಾರಿಸಿ ಐವರು ಪೊಲೀಸರನ್ನು ಕೊಂದಿದ್ದಾನೆ ಹಾಗೂ ಏಳು ಮಂದಿಯನ್ನು ಗಾಯಗೊಳಿಸಿದ್ದಾನೆ ಎಂಬುದಾಗಿ ಪೊಲೀಸರು ಹೇಳಿದ್ದಾರೆ.
ಆತನನ್ನು ಬಳಿಕ ರಿಮೋಟ್ ಕಂಟ್ರೋಲ್ಡ್ ಬಾಂಬ್ ಮೂಲಕ ಪೊಲೀಸರು ಕೊಂದಿದ್ದರು.
25 ವರ್ಷದ ಈ ಕರಿಯ ವ್ಯಕ್ತಿ ಮೆಸ್‌ಕ್ಟಿಟ್‌ನ ಉಪನಗರವೊಂದರಲ್ಲಿ ತನ್ನ ಕುಟುಂಬ ಸದಸ್ಯರೊಂದಿಗೆ ವಾಸಿಸುತ್ತಿದ್ದನು.
ಆತ ತನ್ನ ಫೇಸ್‌ಬುಕ್‌ನಲ್ಲಿ ಆಫ್ರಿಕನ್ ಅಮೆರಿಕನ್ ಡಿಫೆನ್ಸ್ ಲೀಗ್ ಮತ್ತು ನ್ಯೂ ಬ್ಲಾಕ್ ಪ್ಯಾಂತರ್ಸ್ ಪಾರ್ಟಿ ಮುಂತಾದ ಕರಿಯ ತೀವ್ರವಾದಿ ಗುಂಪುಗಳನ್ನು ಅನುಸರಿಸುತ್ತಿದ್ದ.
2009ರಿಂದ ಆರು ವರ್ಷಗಳವರೆಗೆ ಜಾನ್ಸನ್ ಆರ್ಮಿ ರಿಸರ್ವ್‌ನಲ್ಲಿ ‘ಪ್ರೈವೇಟ್ ಫಸ್ಟ್ ಕ್ಲಾಸ್’ ಆಗಿ ಕೆಲಸ ಮಾಡುತ್ತಿದ್ದನು. ಬಡಗಿ ಮತ್ತು ಮೇಸ್ತ್ರಿ ಕೆಲಸಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದನು ಎಂದು ಸೇನೆ ಹೇಳಿದೆ.
ಆತ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂಬುದಾಗಿ ಮಹಿಳಾ ಸೈನಿಕರೊಬ್ಬರು 2014 ಮೇ ತಿಂಗಳಲ್ಲಿ ಆರೋಪಿಸಿದ ಹಿನ್ನೆಲೆಯಲ್ಲಿ ಆತನನ್ನು ವಾಪಸ್ ಕಳುಹಿಸಲಾಗಿತ್ತು.
ಅಧಿಕಾರಿಗಳು ಶುಕ್ರವಾರ ಜಾನ್ಸನ್‌ನ ಮನೆಯಲ್ಲಿ ಶೋಧ ನಡೆಸಿದಾಗ, ಅಲ್ಲಿ ಬಾಂಬ್ ತಯಾರಿಸುವ ಪರಿಕರಗಳು, ಕ್ಷಿಪಣಿ ಹಾರಿಸುವ ನಿಲುವಂಗಿಗಳು, ರೈಫಲ್‌ಗಳು, ಮದ್ದುಗುಂಡುಗಳು ಮತ್ತು ಸಮರ ತಂತ್ರಗಾರಿಕೆಯನ್ನು ಕಲಿಸುವ ಪತ್ರಿಕೆಗಳು ಪತ್ತೆಯಾಗಿವೆ.
‘‘ತನಗೆ ಬಿಳಿಯರ ಬಗ್ಗೆ ಭ್ರಮನಿರಸನವಾಗಿದೆ ಹಾಗೂ ತಾನು ಬಿಳಿಯರನ್ನು, ಅದರಲ್ಲೂ ವಿಶೇಷವಾಗಿ ಬಿಳಿಯ ಪೊಲೀಸ್ ಅಧಿಕಾರಿಗಳನ್ನು ಕೊಲ್ಲಬಯಸುತ್ತೇನೆ ಎಂದು ಆತ ಸಾಯುವ ಮೊದಲು ನಡೆದ ಮಾತುಕತೆಯಲ್ಲಿ ಹೇಳಿದ್ದಾನೆ’’ ಎಂದು ಡಲ್ಲಾಸ್ ಪೊಲೀಸ್ ಮುಖ್ಯಸ್ಥ ಡೇವಿಡ್ ಒ ಬ್ರೌನ್ ಹೇಳಿದರು.

ರೋಬಟ್ ಬಾಂಬರ್ ಬಳಸಿ ಬಂದೂಕುಧಾರಿಯ ಹತ್ಯೆ
ಡಲ್ಲಾಸ್‌ನಲ್ಲಿ ಐವರು ಪೊಲೀಸರನ್ನು ಕೊಂದ ಮಿಕಾ ಝೇವಿಯರ್ ಜಾನ್ಸನ್‌ನನ್ನು ಕೊಲ್ಲಲು ಪೊಲೀಸರು ರೋಬಟ್ ಬಾಂಬರ್‌ನ್ನು ಬಳಸಿರುವುದು ಈಗ ಚರ್ಚೆಯ ವಿಷಯವಾಗಿದೆ. ಅಪರಾಧ ಹೋರಾಟ ಅಸ್ತ್ರವಾಗಿ ತಂತ್ರಜ್ಞಾನವನ್ನು ಬಳಸಿರುವ ಬಗ್ಗೆ ನೈತಿಕ ಚರ್ಚೆಗಳು ನಡೆದಿವೆ.
ಅಭೂತಪೂರ್ವ ಕ್ರಮವೆಂಬಂತೆ, ಬಂದೂಕುಧಾರಿ ಶಂಕಿತನನ್ನು ಕೊಲ್ಲಲು ಪೊಲೀಸರು ಬಾಂಬ್ ನಿಷ್ಕ್ರಿಯಗೊಳಿಸುವ ರೋಬಟನ್ನು ಬಳಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News