ಝಾಕಿರ್ ನಾಯ್ಕ್, ಉವೈಸಿ ವಿರುದ್ಧ ಟೀಕೆಗೆ ಪಿಎಫ್‌ಐ ಖಂಡನೆ

Update: 2016-07-10 18:02 GMT

  ಹೊಸದಿಲ್ಲಿ,ಜು.10: ಇಸ್ಲಾಮಿ ವಿದ್ವಾಂಸ ಝಾಕಿರ್ ನಾಯ್ಕ್ ಮತ್ತು ಎಂಐಎಂ ಮುಖಂಡ ಹಾಗೂ ಸಂಸದ ಅಸದುದ್ದೀನ್ ಉವೈಸಿ ವಿರುದ್ಧ ಕೆಲವು ಬಲಪಂಥೀಯ  ರಾಜಕೀಯ ಪಕ್ಷಗಳು ಮತ್ತು ಸರಕಾರವು ತೀವ್ರ ಟೀಕೆ ನಡೆಸುತ್ತಿರುವುದನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ಅಧ್ಯಕ್ಷ ಶರೀಫ್ ಹೇಳಿಕೆಯಲ್ಲಿ ತೀವ್ರವಾಗಿ ಖಂಡಿಸಿದ್ದಾರೆ. ಅವರಿಬ್ಬರೂ ಸಾರ್ವಜನಿಕ ವ್ಯಕ್ತಿಗಳು ಹಾಗೂ ಅವರ ಕಾರ್ಯಚಟುವಟಿಕೆಗಳು ಮುಖ್ಯವಾಹಿನಿಯಲ್ಲಿ ಬಹಿರಂಗವಾಗಿ ನಡೆಯುತ್ತಿವೆ. ಡಾ. ಝಾಕಿರ್ ನಾಯ್ಕ್ ಒಬ್ಬ ಇಸ್ಲಾಮಿ ಶಿಕ್ಷಕ ಮತ್ತು ವಿದ್ವಾಂಸ. ಪ್ರತಿ ಬಾರಿಯೂ ಅವರು ಎಲ್ಲಾ ವಿಧದ ಭಯೋತ್ಪಾದನೆಗಳನ್ನು ಖಂಡಿಸುತ್ತಲೇ ಬಂದಿದ್ದಾರೆ. ಸಾರ್ವಜನಿಕ ಕ್ಷೇತ್ರಗಳಲ್ಲಿ ಅವರ ಎಲ್ಲಾ ಭಾಷಣಗಳೂ ಲಭ್ಯವಿದೆ ಮತ್ತು ಜಗತ್ತಿನಾದ್ಯಂತ ಸಾವಿರಾರು ವೀಕ್ಷಕರನ್ನು ಅದು ಹೊಂದಿದೆ. ಅವರ ವೀಡಿಯೊ ನೋಡಿದ ಅಥವಾ ಅಂತರ್ಜಾಲದಲ್ಲಿ ಅವರನ್ನು ಅನುಸರಿಸಿದುದಕ್ಕಾಗಿ ಅವರನ್ನು ತನಿಖೆಗೆ ಒಳಪಡಿಸುವುದು ಅಸಂಗತವಾಗಿದೆ.  ಕೇಂದ್ರ ಮತ್ತು ರಾಜ್ಯ ಸರಕಾರದ ಜವಾಬ್ದಾರಿಯುತ ಸಚಿವರಿಂದ ಮತ್ತು ತನಿಖಾ ಸಂಸ್ಥೆಗಳಿಂದ ನೀಡಲಾದ ಹೇಳಿಕೆಗಳು ಕೆಟ್ಟ ಪ್ರೇರಣೆಯಿಂದಾಗಿದೆ. ಡಾ.ಝಾಕಿರ್ ನಾಯ್ಕ್ ವಿರುದ್ಧ ಸರಕಾರಿ ಸಂಸ್ಥೆಗಳ ಉದ್ದೇಶಪೂರ್ವಕ ನಡೆಗಳು ಮುಕ್ತ ಭಾಷಣವನ್ನು ಮತ್ತು ಅಲ್ಪಸಂಖ್ಯಾತರಿಂದ ಧಾರ್ಮಿಕ ಬೋಧನೆಗಳನ್ನು ಮೊಟಕುಗೊಳಿಸುವುದಕ್ಕೆ ಸಮನಾಗಿದೆ ಎಂದು ಶರೀಫ್ ಹೇಳಿದ್ದಾರೆ.

ಹೈದರಾಬಾದ್ ಸ್ಫೋಟ ಪ್ರಕರಣದ ಆರೋಪಿಗಳಿಗೆ ಕಾನೂನು ನೆರವು ನೀಡುವ ಪ್ರಸ್ತಾಪವನ್ನು ಮಾಡಿದ ಉವೈಸಿಯವರನ್ನು ಕಳಂಕಿತರನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಕಾನೂನು ಹೋರಾಟ ಎಂಬುದು ಯಾವನೇ ಆರೋಪಿಯ ಸಂವಿಧಾನಬದ್ಧ ಹಕ್ಕಾಗಿರುತ್ತದೆ. ಆದುದರಿಂದ ಉವೈಸಿ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದ್ದಾರೆ ಎಂಬುದಾಗಿ ಆರೋಪಿಸುವವರಿಗೆ ಈ ನೆಲದ ಇಲ್ಲವೇ, ಭಾರತೀಯ ನ್ಯಾಯಾಂಗ ಪ್ರಕ್ರಿಯೆಯ ಅರಿವಿನ ಕೊರತೆ ಇದೆ ಎಂದಿದ್ದಾರೆ.

ದುರದೃಷ್ಟವಶಾತ್, ಸಮುದಾಯದ ನಾಯಕರನ್ನು ಮೌನವಾಗಿಸುವ ಮೂಲಕ ಮತ್ತು ಒಂದಲ್ಲ ಒಂದು ರೀತಿಯ ನೆಪ ಒಡ್ಡಿ ಸಮುದಾಯದ ಸಾಂವಿಧಾನಿಕ ಹಕ್ಕುಗಳನ್ನು ಕಳಚಲು ಹಿಂದುತ್ವ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂಬುದನ್ನು ನಾವು ಈ ಎರಡೂ ಪ್ರಕರಣಗಳಲ್ಲಿ ಕಾಣಬಹುದು. ಇಂತಹ ಪ್ರಯತ್ನಗಳು ಅಂತಿಮವಾಗಿ ರಾಷ್ಟ್ರೀಯ ಹಿತಾಸಕ್ತಿಗೆ ಮಾರಕವಾಗಲಿದೆ ಎಂದು ಶರೀಫ್ ಎಚ್ಚರಿಸಿದ್ದಾರೆ. ದೇಶದ ಎಲ್ಲಾ ಸಮಾನ ಶಕ್ತಿಗಳು ತಮ್ಮ ಮೌನ ಮುರಿದು ಡಾ. ಝಾಕಿರ್ ನಾಯ್ಕ್ ಮತ್ತು ಉವೈಸಿಯನ್ನು ಬೆಂಬಲಿಸಲು ಮುಂದೆ ಬರಬೇಕೆಂದು ಅವರು ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News