ತನ್ನ ಕಂಪೆನಿಯನ್ನೂ ಬಿಡದ ಮಲ್ಯ!

Update: 2016-07-10 18:51 GMT

ಹೊಸದಿಲ್ಲಿ, ಜು.10: ಮದ್ಯದ ದೊರೆ ವಿಜಯ ಮಲ್ಯ ಅವರಿಗೆ ಹೊಸ ಕಂಟಕ ಎದುರಾಗಿದೆ. ತಮ್ಮ ಹಿಂದಿನ ಕಂಪೆನಿಯಾದ ಯುನೈಟೆಡ್ ಸ್ಪಿರಿಟ್ಸ್ ಕಂಪೆನಿಗೆ 1,225.3 ಕೋಟಿ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಯುನೈಟೆಡ್ ಸ್ಪಿರಿಟ್ಸ್‌ಗೆ ಬರಬೇಕಿದ್ದ ಈ ಬಾರಿ ಮೊತ್ತದ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದು ಹಾಗೂ ಕಿಂಗ್‌ಫಿಶರ್ ಹಾಗೂ ಫಾರ್ಮ್ಯುಲಾ ಒನ್ ಜೊತೆ ಕಾನೂನುಬಾಹಿರ ವಹಿವಾಟು ನಡೆಸಿರುವುದು ಬಹಿರಂಗವಾಗಿದೆ.

ಇದೀಗ ಜಾಗತಿಕ ಸಂಸ್ಥೆಯಾದ ಡಿಯಾಗೊ ಮಾಲಕತ್ವದಲ್ಲಿರುವ ಯುನೈಟೆಡ್ ಸ್ಪಿರಿಟ್ಸ್ ನಡೆಸಿದ ಹೆಚ್ಚುವರಿ ವಿಚಾರಣೆಯಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಹಿಂದಿನ ಮಾತುಕತೆ ವೇಳೆ ಪ್ರಸ್ತಾವಿಸದ ವಿಚಾರವನ್ನು ಇದೀಗ ಪ್ರಸ್ತಾಪಿಸಿ ಮಾಜಿ ಅಧ್ಯಕ್ಷರು ಈ ಮೊತ್ತದ ಮೇಲೆ ಹಕ್ಕುಪ್ರತಿಪಾದನೆಗೆ ಮುಂದಾಗಿದ್ದಾರೆ ಎಂದು ಕಂಪೆನಿ ಪ್ರಕಟಿಸಿದೆ.

ಬಂಧನದಿಂದ ತಪ್ಪಿಸಿಕೊಳ್ಳಲು ಕೆಲ ತಿಂಗಳಿಂದ ಲಂಡನ್‌ನಲ್ಲಿರುವ ಮಲ್ಯ, ಈ ವರ್ಷದ ಆರಂಭದಲ್ಲಿ ಯುಎಸ್‌ಎಲ್ ಜೊತೆ ಒಪ್ಪಂದ ಮಾಡಿಕೊಂಡು, ಕಂಪೆನಿಯ ಅಧ್ಯಕ್ಷ ಹಾಗೂ ನಿರ್ದೇಶಕ ಹುದ್ದೆ ಸೇರಿದಂತೆ ಸಂಪೂರ್ಣವಾಗಿ ಕಂಪೆನಿ ತೊರೆಯಲು 500 ಕೋಟಿ ರೂ. ವ್ಯವಹಾರ ಕುದುರಿಸಿದ್ದರು. ಈ ವಿಷಯ ಶನಿವಾರ ನಡೆದ ಯುಎಸ್‌ಎಲ್ ಆಡಳಿತ ಮಂಡಳಿ ಸಭೆಯಲ್ಲಿ 2015ರ ಎಪ್ರಿಲ್‌ನಲ್ಲಿ ಆರಂಭವಾದ ಹೆಚ್ಚುವರಿ ತನಿಖೆಯ ವರದಿ ವಿಚಾರ ಚರ್ಚೆಗೆ ಬಂದಿದೆ. ಇದರ ಪ್ರಕಾರ, ಬೇರೆ ಕಂಪೆನಿಗಳಿಗೆ ನೀಡಿದ್ದ 1,337 ಕೋಟಿ ರೂ.ಗಳ ಸಾಲದ ವಿಚಾರದಲ್ಲಿ ಅವ್ಯವಹಾರ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News