ಕಾಶ್ಮೀರ ಹಿಂಸಾಚಾರ : ಕರ್ನಾಟಕದ 300 ಅಮರನಾಥ ಯಾತ್ರಾರ್ಥಿಗಳು ಸಂಕಷ್ಟದಲ್ಲಿ

Update: 2016-07-11 10:56 GMT

ಜಮ್ಮು, ಜು.11: ಉಗ್ರ ಬುರ್ಹಾನ್ ವಾನಿ ಹತ್ಯೆಯ ನಂತರ ಕಾಶ್ಮೀರ ಕಣಿವೆಯಲ್ಲಿ ಭುಗಿಲೆದ್ದ ಹಿಂಸಾಚಾರದ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆ ಸ್ಥಗಿತಗೊಂಡಿರುವುದರಿಂದ ಕರ್ನಾಟಕದಿಂದ ಯಾತ್ರೆಗೆ ಹೊರಟಿದ್ದ ಕನಿಷ್ಠ 300 ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕರ್ನಾಟಕದ ಹೆಚ್ಚಿನ ಯತ್ರಾರ್ಥಿಗಳು ಶ್ರೀನಗರದಿಂದ 100 ಕಿ.ಮೀ. ದೂರವಿರುವ ಬಲ್ತಲ್ ಶಿಬಿರದಲ್ಲಿದ್ದಾರೆಂದು ತಿಳಿದು ಬಂದಿದೆ. 300ಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ಸೋನಾಮಾರ್ಗ್‌ನಲ್ಲಿನ ಶಿಬಿರದಲ್ಲಿರಿಸಲಾಗಿದೆ. ಅವರೆಲ್ಲರೂ ಸೇನಾ ಶಿಬಿರದಲ್ಲಿ ಸುರಕ್ಷಿತರಾಗಿದ್ದಾರೆಂದು ಹೊಸದಿಲ್ಲಿಯಲ್ಲಿ ಕರ್ನಾಟಕದ ರೆಸಿಡೆಂಟ್ ಕಮಿಷನರ್ ಆಗಿರುವ ಅತುಲ್ ಕುಮಾರ್ ತಿವಾರಿ ತಿಳಿಸಿದ್ದಾರೆ.

ಕರ್ನಾಟಕ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕಿ ಲೀಲಾ ಸಂಪಿಗೆಯವರ ಪುತ್ರಿ ಎಂ.ಜೆ. ದೀಪಿಕಾ ಕೂಡ ಬಲ್ತಲ್ ಶಿಬಿರದಲ್ಲಿ ಕಳೆದ ಮೂರು ದಿನಗಳಿಂದಿದ್ದಾರೆದು ತಿಳಿದು ಬಂದಿದೆ. ಕಲಾವಿದೆಯಾಗಿರುವ ದೀಪಿಕಾ ಹಾಗೂ ಆಕೆಯ ಪತಿಯನ್ನು ಜಮ್ಮು ಕಾಶ್ಮೀರ ಪೊಲೀಸರು ಬಲ್ತಲ್ ಶಿಬಿರದಲ್ಲಿರುವಂತೆ ಹೇಳಿದ್ದಾರೆಂದು ತಿಳಿದು ಬಂದಿದೆ. ಅವರಿಬ್ಬರೂ ಜುಲೈ 7ರಿಂದ ಅಲ್ಲಿದ್ದಾರೆಂದು ಮಾಹಿತಿಯಿದೆ.

ಅಲ್ಲಿ ಮಳೆ ಹಾಗೂ ಚಳಿಯಿರುವುದರಿಂದ ಹೆಚ್ಚಿನ ಯಾತ್ರಾರ್ಥಿಗಳು ತಮ್ಮನ್ನು ಸೇನೆಯ ರಕ್ಷಣೆಯಲ್ಲಿ ಶ್ರೀನಗರಕ್ಕೆ ಕರೆದುಕೊಂಡು ಹೋಗಲು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ. ಕಾಶ್ಮೀರದಲ್ಲಿ ಸಿಕ್ಕಿ ಹಾಕಿಕೊಂಡಿರುವ ಕರ್ನಾಟಕದ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ಹಿಂದಕ್ಕೆ ಕರೆದುಕೊಂಡು ಬರುವ ಸಲುವಾಗಿ ಕೇಂದ್ರದ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲು ಕರ್ನಾಟಕ ಸರಕಾರ ರವಿವಾರ ಮೂರು ಮಂದಿ ಅಧಿಕಾರಿಗಳ ತಂಡವನ್ನು ರಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News