ಕಾಶ್ಮೀರ ಪ್ರಕ್ಷುಬ್ಧ: ಇಮಾಮ್ ಗುಂಪಿನ ಜತೆ ಗೃಹಸಚಿವರ ಚರ್ಚೆ

Update: 2016-07-12 18:44 GMT

ಶ್ರೀನಗರ, ಜು.12: ಹಿಜ್‌ಬುಲ್ ಮುಜಾಹಿದ್ದೀನ್ ಮುಖಂಡ ಬುರ್ಹಾನ್ ವಾನಿ ಹತ್ಯೆ ಹಿನ್ನೆಲೆಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ತಲೆದೋರಿರುವ ಕಾಶ್ಮೀರದ ಇಮಾಮ್‌ಗಳ ಒಂದು ಗುಂಪನ್ನು ಗೃಹಸಚಿವ ರಾಜ್‌ನಾಥ್ ಸಿಂಗ್ ಅವರು ಮಂಗಳವಾರ ಭೇಟಿ ಮಾಡಿ ಚರ್ಚಿಸಿದರು. ರಾಜ್ಯದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ, ಈ ತಂಡ ಗೃಹಸಚಿವರನ್ನು ಆಗ್ರಹಿಸಿತು.

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹಾಗೂ ಸ್ಥಳೀಯ ವಲಯದ ಅಧಿಕಾರಿಗಳನ್ನೂ ಭೇಟಿ ಮಾಡಿ, ಕಣಿವೆ ರಾಜ್ಯದಲ್ಲಿ ಸಹಜ ಸ್ಥಿತಿ ನಿರ್ಮಾಣವಾಗುವಂತೆ ಮಾಡಲು ನೆರವು ನೀಡುವಂತೆ ಕೋರಲಾಗುವುದು ಎಂದು ಇಮಾಮ್‌ಗಳು ಹೇಳಿದ್ದಾರೆ.

ಗೃಹಸಚಿವರ ಜತೆ ಕಾಶ್ಮೀರ ಪರಿಸ್ಥಿತಿ ಬಗ್ಗೆ ನಾವು ವಿವರವಾದ ಚರ್ಚೆ ನಡೆಸಿದ್ದೇವೆ. ಕಣಿವೆಯಲ್ಲಿ ಸಹಜ ಸ್ಥಿತಿ ಮತ್ತು ಶಾಂತ ಪರಿಸ್ಥಿತಿಯನ್ನು ಮರಳಿ ತರುವಂತೆ ಒತ್ತಾಯಿಸಿದ್ದೇವೆ. ದೇಶದ ಇತರ ಯಾವುದೇ ಭಾಗದ ಮುಸ್ಲಿಮರಂತೆ ಕಾಶ್ಮೀರಿಗಳು ಕೂಡಾ ನಮ್ಮ ಸಹೋದರರು. ಅವರೊಂದಿಗೆ ನಾವಿದ್ದೇವೆ. ಇಲ್ಲಿ ಸಹಜ ಸ್ಥಿತಿ ಮತ್ತು ಶಾಂತಿ ಮರಳುವಂತೆ ಮಾಡಲು ನಾವು ಮನವಿ ಮಾಡುತ್ತಿದ್ದೇವೆ ಎಂದು ಅಖಿಲ ಭಾರತ ಮಸೀದಿಗಳ ಇಮಾಮ್‌ಗಳ ಸಂಘಟನೆ ಮುಖ್ಯಸ್ಥ ಅಹ್ಮದ್ ಇಲ್ಯಾಸ್ ಸ್ಪಷ್ಟಪಡಿಸಿದ್ದಾರೆ.

ವಿಶ್ವದ ಯಾವುದೇ ಭಾಗದಲ್ಲಿ ಯಾವುದೇ ರೀತಿಯ ಭಯೋತ್ಪಾದನೆಯನ್ನು ನಾವು ವಿರೋಧಿಸುತ್ತೇವೆ ಎಂದು ಅವರು ಹೇಳಿದರು. ನಾವು ಕಾಶ್ಮೀರದ ಬಗ್ಗೆ ಮಾತನಾಡುತ್ತಿದ್ದೇವೆ. ಕಾಶ್ಮೀರಿಗಳ ಬಗ್ಗೆ ಅಲ್ಲ. ಕಾಶ್ಮೀರಿಗಳ ಜತೆ ನಾವು ಸಂವಾದ ನಡೆಸಲು ಇದು ಸಕಾಲ ಎಂದು ಅವರು ಹೇಳಿದರು.

ಗೃಹಸಚಿವರು ನಿನ್ನೆ ಕಾಶ್ಮೀರ ವಿವಾದದ ಬಗ್ಗೆ ಚರ್ಚಿಸಲು ವಿರೋಧ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಹಾಗೂ ಎಲ್ಲ ಪಕ್ಷದ ಸಂಸದೀಯ ಮುಖಂಡರನ್ನು ಭೇಟಿ ಮಾಡಿ, ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News