ಸ್ಮ್ರತಿಗೆ ಎರಡು ವರ್ಷದಲ್ಲಿ ಸಾಧ್ಯವಾಗದ್ದನ್ನು ವಾರದಲ್ಲೇ ಮಾಡಿದರು

Update: 2016-07-13 05:51 GMT

ಮಾಜಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ತಾವು ಎರಡು ವರ್ಷಗಳ ಕಾಲ ಸಚಿವೆಯಾಗಿ ಮಾಡಲು ಸಾಧ್ಯವಾಗದ್ದನ್ನು ಪ್ರಕಾಶ್ ಜಾವ್ಡೇಕರ್ ಸಚಿವರಾಗಿ ಅಧಿಕಾರ ವಹಿಸಿಕೊಂಡ ಒಂದೇ ವಾರದಲ್ಲೇ ಮಾಡಿ ತೋರಿಸಿದ್ದಾರೆ.

ಕೇಂದ್ರದ ಬಿಜೆಪಿ ಸರಕಾರದ ಸೈದ್ಧಾಂತಿಕ ಗುರುವಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಂಯೋಜಿತ ಭಾರತೀಯ ಶಿಕ್ಷಾ ಮಂಡಲ್ ಹೊಸ ಶಿಕ್ಷಣ ನೀತಿಯ ಸಂಬಂಧ ಆಯೋಜಿಸಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಿದ್ದ ಜಾವ್ಡೇಕರ್ ಸಂಘದ ಅಭಿಪ್ರಾಯಗಳಿಗೆ ತಮ್ಮ ಸಹಮತ ವ್ಯಕ್ತಪಡಿಸಿದರಲ್ಲದೆ, ಕರಡು ನೀತಿಗೆ ಸಂಘದಿಂದ ಸಲಹೆಗಳನ್ನೂ ಕೇಳಿದ್ದಾರೆ.

ನೈತಿಕ ಶಿಕ್ಷಣದ ಸಂಬಂಧದ ಸಲಹೆಗಳನ್ನು ಸ್ವಾಗತಿಸಿದ ಜಾವ್ಡೇಕರ್ ಪ್ರಾಚೀನಗುರು-ಶಿಷ್ಯ ಪರಂಪರೆಯನ್ನು ಉತ್ತೇಜಿಸುವ ವಿಚಾರಕ್ಕೂ ತಮ್ಮ ಬೆಂಬಲ ವ್ಯಕ್ತಪಡಿಸಿದರಲ್ಲದೆ, ಉತ್ತಮ ಹಾಗೂ ರಚನಾತ್ಮಕ ಸಲಹೆಗಳು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಾನ ಪಡೆಯುವುದಾಗಿ ತಿಳಿಸಿದರು.

ಶಿಕ್ಷಣ ದೇಶದ ಹಕ್ಕಾಗಿದ್ದು ಅದನ್ನು ಯಾವುದೇ ರಾಜಕೀಯ ಸಿದ್ಧಾಂತದೊಂದಿಗೆ ಥಳಕು ಹಾಕಬಾರದೆಂದು ಹೇಳಲು ಆರೆಸ್ಸೆಸ್ ಹಿನ್ನೆಲೆಯಿಂದ ಬಂದಿರುವ ಜಾವ್ಡೇಕರ್ ಮರೆಯಲಿಲ್ಲ. ಯಾವುದೇ ಒಂದು ವಿಭಾಗಕ್ಕೆ ಸೀಮಿತವಾಗದೆ ತಾನು ಇಡೀ ದೇಶದ ಸಚಿವನೆಂದು ಬಿಂಬಿಸಲೂ ಜಾವ್ಡೇಕರ್ ಯತ್ನಿಸಿದರು. ‘‘ಶಿಕ್ಷಣವು ಎಲ್ಲರನ್ನೊಳಗೊಂಡಿರಬೇಕು ಹಾಗೂ ಪಕ್ಷ ರಾಜಕೀಯದಿಂದ ಹೊರತಾಗಿರಬೇಕು,’’ಎಂದು ಅವರು ತಿಳಿಸಿದರು.

ಶಿಕ್ಷಣ ನೀತಿಯನ್ನು ರಚಿಸುವ ಸಲುವಾಗಿ ಪಕ್ಷ ಹಾಗೂ ಸಿದ್ಧಾಂತಗಳ ಗಡಿ ದಾಟಿ ತಾನು ಎಲ್ಲರೊಂದಿಗೂ ಚರ್ಚೆಗೆ ಸಿದ್ಧನಿರುವುದಾಗಿಯೂ ಜಾವ್ಡೇಕರ್ ಹೇಳಿದ್ದಾರೆ. ‘‘ಎಲ್ಲಾ ವಿಧದ ಸಲಹೆಗಳಿಗೂ ಹಾಗೂ ಎಲ್ಲಾ ಸಂಬಂಧಿತರ ಮಾತುಗಳನ್ನೂ ಕೇಳಲು ನಾನು ತೆರೆದ ಮನಸ್ಸು ಹೊಂದಿದ್ದೇನೆ.’’ ಎಂದು ಜಾವ್ಡೇಕರ್ ಹೇಳಿದರು.

ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗುವ ಮೊದಲೇ ಈ ಸಭೆಯ ದಿನಾಂಕವನ್ನು ನಿಗದಿ ಪಡಿಸಲಾಗಿತ್ತು. ‘‘ಮಾಜಿ ಉನ್ನತ ಶಿಕ್ಷಣ ರಾಜ್ಯ ಸಚಿವ ರಾಮ್ ಶಂಕರ್ ಕಥೇರಿಯಾ ಈ ಸಭೆಯಲ್ಲಿ ಭಾಗವಹಿಸುವವರಿದ್ದರು. ಆದರೆ ಜಾವ್ಡೇಕರ್ ನಮ್ಮ ಮನವಿಗೆ ಸ್ಪಂದಿಸಿ ಸಭೆಯಲ್ಲಿ ಭಾಗವಹಿಸಿದರು’’ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್ ತಿಳಿಸಿದರು.

ಹೊಸ ಶಿಕ್ಷಣ ನೀತಿರಚಿಸುವ ವಿಚಾರದಲ್ಲಿ ಭಾರತೀಯ ಶಿಕ್ಷಾ ಮಂಡಲ್ ಬಹಳಷ್ಟು ಆಸಕ್ತಿ ವಹಿಸಿದ್ದು ಈಗಾಗಲೇ ದೇಶದಾದ್ಯಂತ ಹಲವಾರು ಸಭೆಗಳನ್ನು ನಡೆಸಿ ಸಚಿವಾಲಯಕ್ಕೆ 1.5 ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ನೀಡಿದೆ. ಆದರೆ ಹಲವಾರು ಆರೆಸ್ಸೆಸ್ ನಾಯಕರುಗಳ ಪ್ರಯತ್ನಗಳ ಹೊರತಾಗಿಯೂ ತಮ್ಮ ಅಧಿಕಾರಾವಧಿಯಲ್ಲಿ ಇರಾನಿ ಇಂತಹ ಸಂಘಟನೆಗಳೊಂದಿಗೆ ಯಾವತ್ತೂ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಸಂಘದ ನಾಯಕರೊಂದಿಗೆ ಅವರ ಸಭೆಗಳು ಯಾವತ್ತೂ ರಹಸ್ಯವಾಗಿಯೇ ನಡೆಯುತ್ತಿತ್ತಲ್ಲದೆ, ಆಕೆ ಹೆಚ್ಚಿನ ಶೈಕ್ಷಣಿಕ ತಜ್ಞರೊಂದಿಗೆ ಸಂಪರ್ಕ ಸಾಧಿಸಲು ಯತ್ನಿಸಲೇ ಇಲ್ಲ.

ಆದರೆ ಎಚ್‌ಆರ್‌ಡಿ ಸಚಿವಾಲಯದ ಕಾರ್ಯಭಾರ ವಹಿಸಿದ ಒಂದು ವಾರದೊಳಗೆ ಜಾವ್ಡೇಕರ್ ಇಂತಹ ಎರಡು ಸಭೆಗಳಲ್ಲಿ ಭಾಗವಹಿಸಿದ್ದರು. ಕಳೆದ ವಾರವಷ್ಟೇ ಅವರು ಪುಣೆಯ ಫರ್ಗುಸ್ಸನ್ ಕಾಲೇಜಿಗೆ ಭೇಟಿ ನೀಡಿ, ಗುರುಪ್ರಣಾಮ್ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಸನ್ಮಾನ ಮಾಡಿದ್ದರು.
ರಾಷ್ಟ್ರೀಯ ಕರಡು ಶಿಕ್ಷಣ ನೀತಿಯು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದ್ದು ಸಲಹೆಗಳನ್ನು ಜುಲೈ 30 ರ ತನಕ ಸ್ವೀಕರಿಸಲಾಗುವುದು.

ಕೃಪೆ: ಡಿಎನ್ಎ 

Writer - ರೋಹಿಣಿ ಸಿಂಗ್

contributor

Editor - ರೋಹಿಣಿ ಸಿಂಗ್

contributor

Similar News