ಶಾಂತಿಗಾಗಿ ಮೆಹಾಬೂಬ ಮುಫ್ತಿ ಕರೆ

Update: 2016-07-13 16:38 GMT

 ಶ್ರೀನಗರ, ಜು.13: ಇತ್ತೀಚೆಗೆ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ಬಳಿಕ ಮೊದಲ ಬಾರಿಗೆ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಬುಧವಾರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.ಇತಿಹಾಸ ಪ್ರಸಿದ್ಧ ನಕ್ಷಾಬಂದ್ ಸಾಹಿಬ್ ದರ್ಗಾದ ಬಳಿ ಸಾರ್ವಜನಿಕ ಭಾಷಣ ಮಾಡಿದ ಅವರು, ಶಾಂತರಾಗಿರುವಂತೆ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.

 ಹುತಾತ್ಮರ ಸಮಾಧಿಗೆ ತೆರಳಿ ನಮನ ಸಲ್ಲಿಸಿದ ಮುಖ್ಯಮಂತ್ರಿ ಮೆಹಬೂಬ, ಜನರು ತಮ್ಮ ಹಕ್ಕುಗಳಿಗಾಗಿ ದಂಗೆಯೆದ್ದ ನಡುವೆ ಡೋಗ್ರ ರಾಜನ ಸೇನಾನಿಗಳಿಂದ ಶ್ರೀನಗರದ ಕೇಂದ್ರೀಯ ಕಾರಾಗೃಹದಲ್ಲಿ 1931ರ ಜುಲೈ 13ರಂದು 22 ಕಾಶ್ಮೀರಿಗಳು ಗುಂಡೇಟಿಗೆ ಬಲಿಯಾಗಿದ್ದರು.
  ‘‘ಸರ್ವಾಧಿಕಾರ ಮತ್ತು ದಮನ ನೀತಿಯ ವಿರುದ್ಧ ಅವರು ಕೆಚ್ಚದೆಯಿಂದ ತಮ್ಮ ಜೀವವನ್ನು ಅರ್ಪಿಸಿದ ಧೀರ ವೀರರಾಗಿದ್ದಾರೆ’’ ಎಂದು ಮುಖ್ಯಮಂತ್ರಿ ಮೆಹಬೂಬ ಬಣ್ಣಿಸಿದ್ದಾರೆ.
 ಹುತಾತ್ಮರಿಗೆ ನೀಡುವ ದೊಡ್ಡ ನಮನವೆಂದರೆ ಅವರು ಹೋರಾಡಿದ ಪ್ರಜಾಸತ್ತಾತ್ಮಕ ವೌಲ್ಯಗಳನ್ನು ಎತ್ತಿಹಿಡಿಯುದಾಗಿದೆ.ಅವರು ನಮಗಾಗಿ ಏನೆಲ್ಲಾ ಸಾಧಿಸಿದ್ದರೋ ಅವುಗಳ ರಕ್ಷಣೆ ಮತ್ತು ನಾವು ಶಾಂತಿಯನ್ನು ಪಾಲಿಸಿಕೊಂಡು ಬರಬೇಕೆಂದು ಮುಖ್ಯಮಂತ್ರಿ ಮೆಹಬೂಬಾ ಕರೆ ನೀಡಿದರು.
 ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ ಭದ್ರತಾ ಪಡೆಗಳಿಂದ ಹತರಾದ ನಂತರ ಕಣಿವೆ ರಾಜ್ಯದ ಹಲವೆಡೆ ಹಿಂಸಾಚಾರ ಭುಗಿಲೆದ್ದು, 30ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಸುಮಾರು 1,400 ಮಂದಿ ಗಾಯಗೊಂಡ ಐದು ದಿನಗಳ ಬಳಿಕ ಮುಖ್ಯಮಂತ್ರಿ ಮೆಹಬೂಬ ಈ ಹೇಳಿಕೆ ನೀಡಿದ್ದಾರೆ.
 ಕಾಲು ಶತಮಾನದಿಂದ ಸಾಂಪ್ರದಾಯಿಕವಾಗಿ ಜುಲೈ 13ರಂದು ಬಿಗಿ ಭದ್ರತೆಯಲ್ಲಿ ಅಧಿಕೃತವಾಗಿ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಆದರೂ 1990ರ ಆರಂಭದಲ್ಲಿ ಕಣಿವೆ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. 1931ರ ಹುತಾತ್ಮರು ಈಗಲೂ ರಾಜಕೀಯ ಪಕ್ಷಗಳ ಸರಕಾಗಿ ಮುಂದುವರಿದಿದ್ದಾರೆ.
     ಇದೇ ವೇಳೆ ನ್ಯಾಶನಲ್ ಕಾನ್ಫೆರೆನ್ಸ್ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಹುತಾತ್ಮರ ಸಮಾಧಿಗೆ ತೆರಳಿ ನಮನ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ಸರಕಾರದ ನಿಷ್ಪ್ರಯೋಜಕ ಆದ್ಯತೆಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯದ ಎಲ್ಲ ಕಡೆಗಳಲ್ಲಿ ಹಿಂಸಾಚಾರ ತೀವ್ರಗೊಂಡಿರುವ ಸಂದರ್ಭದಲ್ಲಿ ಮುಫ್ತಿಯ ತನ್ನ ಸಭೆಗಳಿಗೆ ಜನರನ್ನು ಪೊಲೀಸ್ ಬಸ್‌ಗಳಲ್ಲಿ ಸಾಗಿಸುವುದರಲ್ಲಿ ನಿರತರಾಗಿದ್ದಾರೆ ಸರಕಾರದ ಆಡಳಿತದ ಕಡೆ ಗಮನವನ್ನು ಕೇಂದ್ರಿಕರಿಸಬೇಕಾಗಿದ್ದವರು ಅಂತಹ ನಾಟಕದಿಂದ ಅವರು ಸಹಜತೆ ಸೃಷ್ಟಿಸುವ ಭ್ರಮೆಯನ್ನು ಹೊಂದಿದ್ದಾರೆ ಎಂದು ಆರೋಪಿಸಿದರು.
 ‘ಸಾವಿನ ಸರಣಿ ಚಕ್ರ’ಕ್ಕೆ ಅಂತ್ಯ ಹಾಡಬೇಕಾದ ಅಗತ್ಯವನ್ನು ಪುನರುಚ್ಚರಿಸಿದ ಉಮರ್, ಕಾಶ್ಮೀರದ ಆಸ್ಪತ್ರೆಗಳಲ್ಲಿ ಸಂತ್ರಸ್ತರು ತುಂಬಿತುಳುಕಿರುವ ಹಿನ್ನೆಲೆಯಲ್ಲಿ ಅಗತ್ಯ ನೆರವನ್ನು ಪೂರೈಕೆ ಮಾಡಬೇಕೆಂದು ಕೇಂದ್ರ ಸರಕಾರಕ್ಕೆ ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News