ಜೆಟ್ ಏರ್ವೇಸ್ ನಲ್ಲಿ ಹೆಚ್ಚುವರಿ ಕ್ಯಾಬಿನ್ ಬ್ಯಾಗ್ ಗೆ ಶುಲ್ಕ, ಶುಕ್ರವಾರದಿಂದ ಜಾರಿ

Update: 2016-07-14 15:29 GMT

ಹೊಸದಿಲ್ಲಿ, ಜು.14: ದೇಶೀಯ ವಿಮಾನಯಾನಿಗಳು ಲಘು ಲಗೇಜ್ ಗಳನ್ನು ಒಯ್ಯುವ ಪರಿಪಾಠ ರೂಢಿಸಿಕೊಳ್ಳದಿದ್ದರೆ, ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಹೆಚ್ಚುವರಿ ಕ್ಯಾಬಿನ್ ಬ್ಯಾಗ್ ಗಳ  ಮೇಲೆ 900 ರೂಪಾಯಿ ಶುಲ್ಕ ವಿಧಿಸಲು ಜೆಟ್ ಏರ್ವೇಸ್ ನಿರ್ಧರಿಸಿದೆ. ಆರು ಮೆಟ್ರೊ ನಗರಗಳಿಂದ ಯಾನ ಕೈಗೊಳ್ಳುವ ಪ್ರಯಾಣಿಕರಿಗೆ ಶುಕ್ರವಾರದಿಂದಲೇ ಈ ಶುಲ್ಕ ಜಾರಿಯಾಗಲಿದೆ.

ವಿಮಾನ ಪ್ರಯಾಣಿಕರು ಎಕಾನಮಿ ಕ್ಲಾಸ್ ಅಥವಾ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಾರೆಯೇ ಎಂಬ ಆಧಾರದಲ್ಲಿ 7ರಿಂದ 10 ಕೆ.ಜಿ. ತೂಕದ ಒಂದು ಕೈಚೀಲವನ್ನು ತಮ್ಮೊಂದಿಗೆ ಒಯ್ಯಲು ಅವಕಾಶವಿದೆ. ಅಂತೆಯೇ ಜೆಟ್ ಪ್ರಿವಿಲೆಜ್ ಪ್ಲಾಟಿನಮ್ ಮತ್ತು ಗೋಲ್ಡ್ ಸದಸ್ಯರಿಗೆ ಲ್ಯಾಪ್ಟಾಪ್ ಬ್ಯಾಗ್ ಹಾಗೂ ಮಹಿಳೆಯರ ಪರ್ಸ್ ಗೆ ಹೆಚ್ಚುವರಿ ಶುಲ್ಕ ಇಲ್ಲ. ಇತರ ಹೆಚ್ಚುವರಿ ಕ್ಯಾಬಿನ್ ಬ್ಯಾಗ್ ಗಳಿಗೆ 900 ರೂಪಾಯಿ ಶುಲ್ಕ ತೆರಬೇಕಾಗುತ್ತದೆ ಎಂದು ಜೆಟ್ ಏರ್ವೇಸ್ ಹೇಳಿದೆ.
ಹೆಚ್ಚುವರಿ ಬ್ಯಾಗ್ ಗಳನ್ನು ಹಲವು ಮಂದಿ ಪ್ರಯಾಣಿಕರು ಒಯ್ಯುವುದರಿಂದ ಅದನ್ನು ನಿರ್ವಹಿಸುವುದು ಕಷ್ಟವಾಗುತ್ತಿದೆ. ಏರ್ಲೈನ್ಸ್ ಸಂಸ್ಥೆಗಳು ಚೆಕ್ ಇನ್ ಬ್ಯಾಗೇಜ್ ತೂಕವನ್ನು 20 ರಿಂದ 15 ಕೆಜಿಗೆ ಇಳಿಸಿವೆ. ಏರ್ ಏಷ್ಯಾ ಇಂಡಿಯಾ ಇಲ್ಲಿ ಕಾರ್ಯಾಚರಣೆ ಆರಂಭಿಸಿದಾಗ, ಚೆಕ್ ಇನ್ ಬ್ಯಾಗ್ ಗಳಿಗೆ ಕೂಡಾ ಶುಲ್ಕ ವಿಧಿಸಲು ಮುಂದಾಗಿತ್ತು. ಆದರೆ ಇದನ್ನು ವಿಮಾನ ನಿಲ್ದಾಣಗಳ ಪ್ರಾಧಿಕಾರ ತಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News