ಮಾಧ್ಯಮಗಳೊಂದಿಗೆ ತನ್ನ ಸಂವಾದವನ್ನು ಮತ್ತೆ ರದ್ದುಗೊಳಿಸಿದ ಝಾಕಿರ್ ನಾಯ್ಕ್

Update: 2016-07-14 14:42 GMT

ಮುಂಬೈ,ಜು.14: ತನ್ನ ಭಾಷಣಗಳ ಮೂಲಕ ಢಾಕಾ ಭಯೋತ್ಪಾದಕ ದಾಳಿಕೋರರ ಪೈಕಿ ಕೆಲವರಿಗೆ ಸ್ಫೂರ್ತಿಯಾಗಿದ್ದರೆಂಬ ಆರೋಪದ ಕಾವನ್ನು ಎದುರಿಸುತ್ತಿರುವ ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ತನ್ನ ಸಂವಾದ ಕಾರ್ಯಕ್ರಮವನ್ನು ಮತ್ತೆ ರದ್ದುಗೊಳಿಸಿದ್ದಾರೆ. ಅವರು ಇಂದು ಇಲ್ಲಿಯ ಅಗ್ರಿಪಾಡಾದ ಮೆಹಫಿಲ್ ಹಾಲ್‌ನಲ್ಲಿ ಸ್ಕೈಪ್ ಮೂಲಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುವುದು ನಿಗದಿಯಾಗಿತ್ತು. ಆದರೆ ಹಾಲ್‌ನ ಅಧಿಕಾರಿಗಳ ಒತ್ತಡಗಳಿಂದಾಗಿ ಕಾರ್ಯಕ್ರಮವನ್ನು ರದ್ದುಪಡಿಸಬೇಕಾಯಿತು ಎಂದು ಝಾಕಿರ್ ಸಹಾಯಕರು ತಿಳಿಸಿದ್ದಾರೆ. ಝಾಕಿರ್ ಈ ಕಾರ್ಯಕ್ರಮದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸುವ ನಿರೀಕ್ಷೆಯಿತ್ತು.

ಸಂವಾದ ಕಾರ್ಯಕ್ರಮಕ್ಕೆ ಎಲ್ಲ ವ್ಯವಸ್ಥೆಗಳನ್ನೂ ಮಾಡಲಾಗಿತ್ತು. ಆದರೆ ಬುಧವಾರ ರಾತ್ರಿ 11 ಗಂಟೆಯ ಸುಮಾರಿಗೆ ಹಾಲ್‌ನ ಆಡಳಿತಾಧಿಕಾರಿಗಳು ಸುದ್ದಿಗೋಷ್ಠಿಗೆ ಅವಕಾಶ ನೀಡುವುದಿಲ್ಲ ಎಂದು ಅಲ್ಲಿದ್ದ ನಮ್ಮ ತಂಡಕ್ಕೆ ಖಡಾಖಂಡಿತವಾಗಿ ತಿಳಿಸಿದ್ದರು. ಹೀಗಾಗಿ ಬೇರೆ ಆಯ್ಕೆಯಿಲ್ಲದೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಝಾಕಿರ್ ಸಹಾಯಕರೋರ್ವರು ಇಲ್ಲಿ ಹೇಳಿಕೆಯೊಂದರಲ್ಲಿ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ನಾಯ್ಕ ಅವರ ಸಂವಾದ ಕಾರ್ಯಕ್ರಮವನ್ನು ಈ ವಾರದ ಆದಿಯಲ್ಲಿ ಮೊದಲು ಟ್ರೈಡೆಂಟ್ ಹೋಟೆಲ್‌ನಲ್ಲಿ ಏರ್ಪಡಿಸಲಾಗಿತ್ತು. ಬಳಿಕ ಸ್ಥಳವನ್ನು ವರ್ಲ್ಡ್ ಟ್ರೇಡ್ ಸೆಂಟರ್‌ಗೆ ಬದಲಿಸಲಾಗಿತ್ತು. ನಂತರ ಮತ್ತೆ ಬದಲಿಸಿ ಅಗ್ರಿಪಾಡಾದ ಮೆಹಫಿಲ್ ಹಾಲ್‌ನ್ನು ನಿಗದಿ ಮಾಡಲಾಗಿತ್ತು. ಅದೂ ಈಗ ರದ್ದಾಗಿದೆ.

ನಾಯ್ಕ್ ಅವರ ಸುದ್ದಿಗೋಷ್ಠಿಗೆ ಸ್ಥಳಾವಕಾಶ ನೀಡದಂತೆ ಮುಂಬೈ ಪೊಲೀಸರು ಪ್ರಸಿದ್ಧ ಹೋಟೆಲ್‌ಗಳಿಗೆ ಸೂಚಿಸಿದ್ದಾರೆ ಎಂದು ಸಂವಾದ ಕಾರ್ಯಕ್ರಮದ ಸಂಘಟಕರು ಗುರುವಾರ ಹೇಳಿದ್ದರಾದರೂ,ಬಳಿಕ ಈ ಆರೋಪವನ್ನು ವಾಪಸ್ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News