ತಾಸಿಗೆ 180 ಕಿ.ಮೀ. ಓಡುವ ಟಾಲ್ಗೊ

Update: 2016-07-14 17:22 GMT

ಮಥುರಾ, ಜು.14: ಭಾರತೀಯ ರೈಲ್ವೆಯು ಮಥುರಾ-ಪಲ್ವಾಲ್ ಮಾರ್ಗದಲ್ಲಿ ನಡೆಸಿದ ಪರೀಕ್ಷೆಯೊಂದರಲ್ಲಿ ಸ್ಪೇನ್ ನಿರ್ಮಿತ ಟಾಲ್ಗೊ ರೈಲು 38 ನಿಮಿಷಗಳಲ್ಲಿ 84 ಕಿ.ಮೀ. ದೂರ ಕ್ರಮಿಸುವ ಮೂಲಕ (ಗಂಟೆಗೆ 180 ಕಿ.ಮೀ.) ದೇಶದ ಅತ್ಯಂತ ವೇಗದ ರೈಲು ಎನಿಸಿಕೊಂಡಿದೆ. ಅದು ಗತಿಮಾನ್ ಎಕ್ಸ್‌ಪ್ರೆಸ್‌ನ ದಾಖಲೆಯನ್ನು ಮುರಿದಿದೆ.

ತನ್ನ ಹೆಗ್ಗುರುತಿನ ಹಾಗೂ ಆಧುನಿಕ ತಂತ್ರ ಜ್ಞಾನದಿಂದಾಗಿ, ಗಂಟೆಗೆ 180 ಕಿ.ಮೀ. ವೇಗದಲ್ಲಿ ಸಂಚರಿಸುವ ಮೂಲಕ ನಿನ್ನೆ ಈ ರೈಲು ಪರೀಕ್ಷಾ ಯಾನವನ್ನು ಯಶಸ್ವಿಯಾಗಿ ಪೂರೈಸಿದೆಯೆಂದು ಆಗ್ರಾ ವಲಯ ರೈಲ್ವೆ ಪ್ರಬಂಧಕ ಪ್ರಭಾಸ್‌ಕುಮಾರ್ ತಿಳಿಸಿದ್ದಾರೆ.
ಪರೀಕ್ಷೆಯ 5ನೆ ದಿನ ರೈಲು ಮಥುರಾ ಹಾಗೂ ಪಲ್ವಾಲ್ ಮಾರ್ಗದ 84 ಕಿ.ಮೀ. ದೂರವನ್ನು 38 ನಿಮಿಷಗಳಲ್ಲಿ ಕ್ರಮಿಸಿದೆ. ಪರೀಕ್ಷಾ ಓಟದ ಎರಡನೆ ಹಂತ ಜು.9ರಂದು ಆರಂಭವಾಗಿತ್ತು.
ಮೊದಲ ದಿನದ ಪ್ರಯೋಗದ ವೇಳೆ ರೈಲು ಮಥುರಾ-ಪಲ್ವಾಲ್ ಮಾರ್ಗವನ್ನು ಗಂಟೆಗೆ 120 ಕಿ.ಮೀ. ವೇಗದಲ್ಲಿ ಕ್ರಮಿಸಿತ್ತು. ಆ ಬಳಿಕ ರೈಲಿನ ವೇಗವನ್ನು ಪ್ರತಿದಿನ ಗಂಟೆಗೆ 10 ಕಿ.ಮೀ.ಗಳಷ್ಟು ಹೆಚ್ಚಿಸುತ್ತ ಹೋಗಲು ನಿರ್ಧರಿಸಲಾಗಿತ್ತು.
ಯಶಸ್ವೀ ಪ್ರಾಯೋಗಿಕ ಓಟದಿಂದ ಉತ್ತೇಜನಗೊಂಡು, ಮಂಗಳವಾರ ರೈಲಿನ ವೇಗವನ್ನು ತಾಸಿಗೆ 170 ಕಿ.ಮೀ.ಗೆ ಏರಿಸಲಾಗಿತ್ತು. ಇನ್ನೀಗ ಪ್ರಯಾಣಿಕರ ಬದಲು ಮರಳಿನ ಚೀಲಗಳನ್ನು ತುಂಬಿಸಿ ಮುಂದಿನ ಪರೀಕ್ಷಾ ಓಟ ನಡೆಸುವ ಮೂಲಕ ರೈಲಿನ ಸ್ಥಿತಿಗತಿಗಳನ್ನು ಪರಿಶೀಲಿಸಲಾಗುವುದು.
ಮುಂದಿನ ಪ್ರಯೋಗವನ್ನು ಮಥುರಾದಿಂದ ಮುಂಬೈಗೆ ಹೋಗುವ ರಾಜಧಾನಿ ಎಕ್ಸ್‌ಪ್ರೆಸ್‌ನ ಮಾರ್ಗದಲ್ಲಿ ನಡೆಸಲಾಗುವುದು. ರಾಷ್ಟ್ರ ರಾಜಧಾನಿ ಹೊಸದಿಲ್ಲಿಯನ್ನು ವಾಣಿಜ್ಯ ರಾಜಧಾನಿ ಮುಂಬೈಗೆ ಸಂಪರ್ಕಿಸುವ ಗುರಿಯನ್ನು ಟಾಲ್ಗೊ ಇರಿಸಿಕೊಂಡಿದೆ.
ಗತಿಮನ್ ಎಕ್ಸ್‌ಪ್ರೆಸ್ ತಾಸಿಗೆ 160 ಕಿ.ಮೀ. ಶತಾಬ್ದಿ ಎಕ್ಸ್‌ಪ್ರೆಸ್ 150 ಕಿ.ಮೀ. ಹಾಗೂ ರಾಜಧಾನಿ ಎಕ್ಸ್‌ಪ್ರೆಸ್ 130 ಕಿ.ಮೀ. ಗರಿಷ್ಠ ವೇಗದಲ್ಲಿ ಓಡುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News