ಶೀಲಾ ದೀಕ್ಷಿತ್‌ಗೆ ಎಸಿಬಿಯಿಂದ ನೋಟಿಸ್ ನೀರು ಟ್ಯಾಂಕರ್ ಹಗರಣ

Update: 2016-07-14 17:23 GMT

ಹೊಸದಿಲ್ಲಿ, ಜು.14: 400 ಕೋ.ರೂ.ಗಳ ನೀರು ಟ್ಯಾಂಕರ್ ಹಗರಣಕ್ಕೆ ಸಂಬಂಧಿಸಿದಂತೆ ಜು.26ರಂದು ತನ್ನೆದುರು ವಿಚಾರಣೆಗೆ ಹಾಜರಾಗುವಂತೆ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತ್ತು ದಿಲ್ಲಿ ಜಲಮಂಡಳಿಯ ಕೆಲವು ಅಧಿಕಾರಿಗಳಿಗೆ ದಿಲ್ಲಿ ಸರಕಾರದ ಭ್ರಷ್ಟಾಚಾರ ನಿಗ್ರಹ ಶಾಖೆ(ಎಸಿಬಿ)ಯು ಬುಧವಾರ ನೋಟಿಸುಗಳನ್ನು ಹೊರಡಿಸಿದೆ. ಇದೇ ವೇಳೆ ತನ್ನ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ದೀಕ್ಷಿತ್ ಬಣ್ಣಿಸಿದ್ದಾರೆ.

 ವಿಶೇಷ ಪೊಲೀಸ್ ಆಯುಕ್ತ ಹಾಗೂ ಎಸಿಬಿ ವರಿಷ್ಠ ಎಂ.ಕೆ.ಮೀನಾ ಅವರು ಗುರುವಾರ ಇಲ್ಲಿ ಈ ವಿಷಯವನ್ನು ತಿಳಿಸಿದರು. ನೋಟಿಸ್ ನೀಡಿದ್ದರೂ ದೀಕ್ಷಿತ್ ವಿಚಾರಣೆಗೆ ಹಾಜರಾಗದಿದ್ದರೆ ಏನಾಗುತ್ತದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಈ ಸಂಬಂಧ ಏನೂ ಹೇಳಲು ಸಾಧ್ಯವಿಲ್ಲ. ನಾವು ಕಾನೂನಿಗನುಗುಣವಾಗಿ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಅವರು ಉತ್ತರಿಸಿದರು.
 ದೀಕ್ಷಿತ್ ಜೊತೆಗೆ ತಳುಕು ಹಾಕಿಕೊಂಡಿದೆ ಎನ್ನಲಾಗಿರುವ ಹಗರಣಕ್ಕೆ ಸಂಬಂಧಿಸಿದಂತೆ ಎಸಿಬಿ ಜೂ.20ರಂದು ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಹಗರಣ ಸಂಬಂಧ ಎಸಿಬಿ ಎರಡು ದೂರುಗಳನ್ನು ಸ್ವೀಕರಿಸಿದ್ದು, ಇವುಗಳಲ್ಲಿ ಹೆಸರಿಸಲಾದವರಲ್ಲಿ ದೀಕ್ಷಿತ ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದ್ದಾರೆ. ದೀಕ್ಷಿತ್ ಮತ್ತು ಕೇಜ್ರಿವಾಲ್ ಇಬ್ಬರನ್ನೂ ಪ್ರಶ್ನಿಸಲಾಗುವುದು ಎಂದು ಮೀನಾ ಆಗ ಹೇಳಿದ್ದರು.
ಪ್ರಕರಣ ದಾಖಲಾಗುವುದಕ್ಕೆ ಒಂದು ವಾರ ಮೊದಲು ದಿಲ್ಲಿ ಸರಕಾರವು ಹಗರಣದ ಕುರಿತು ಸತ್ಯಶೋಧನಾ ಸಮಿತಿಯ ವರದಿಯನ್ನು ಲೆಗ ನಜೀಬ್ ಜಂಗ್ ಅವರಿಗೆ ಕಳುಹಿಸಿತ್ತು. ಕೇಜ್ರಿವಾಲ ಅವರು ಸಮಿತಿಯ ವರದಿಯನ್ನು 11 ತಿಂಗಳ ಕಾಲ ಮುಚ್ಚಿಟ್ಟಿದ್ದರು ಎಂದು ಆರೋಪಿಸಿ ದಿಲ್ಲಿಯ ಬಿಜೆಪಿ ನಾಯಕ ವಿಜೇಂದರ್ ಗುಪ್ತಾ ಅವರೂ ಜಂಗ್ ಅವರಿಗೆ ದೂರು ಸಲ್ಲಿಸಿದ್ದರು. ಸಮಿತಿಯ ವರದಿ ಮತ್ತು ಗುಪ್ತಾರ ದೂರನ್ನು ಲೆಫ್ಟಿನೆಂಟ್ ಗವರ್ನರ್ ಅವರು ಎಸಿಬಿಗೆ ರವಾನಿಸಿದ್ದರು.

ದಿಲ್ಲಿಯ ಜಲಸಚಿವ ಕಪಿಲ್ ಮಿಶ್ರಾ ಅವರೂ ಹಗರಣಕ್ಕೆ ಸಂಬಂಧಿಸಿದಂತೆ ದೀಕ್ಷಿತ್ ವಿರುದ್ಧ ಸಿಬಿಐ ಅಥವಾ ಎಸಿಬಿ ತನಿಖೆಗೆ ಶಿಫಾರಸು ಮಾಡಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಂಗ್ ಅವರಿಗೆ ಪತ್ರಗಳನ್ನು ಬರೆದಿದ್ದರು. ಈ ಹಗರಣದಿಂದ ರಾಜ್ಯದ ಬೊಕ್ಕಸಕ್ಕೆ ಸುಮಾರು 400 ಕೋ.ರೂ. ನಷ್ಟ ಸಂಭವಿಸಿದೆ ಎಂದು ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ ಎಂದೂ ಅವರು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News