ಆತ್ಮಹತ್ಯಾ ದಾಳಿಯನ್ನು ನಾನು ಖಂಡಿಸದ ವೀಡಿಯೋ ತೋರಿಸಿ : ಮಾಧ್ಯಮಗಳಿಗೆ ಝಾಕಿರ್ ನಾಯ್ಕ್ ಸವಾಲು

Update: 2016-07-15 12:17 GMT

ಮದೀನಾ,ಜು.15 : ವಿಶ್ವದ ಯಾವುದೇ ಭಾಗದಲ್ಲಿ ನಡೆಯುವ ಉಗ್ರ ದಾಳಿಗಳನ್ನು ತಾನು ಖಂಡಿಸುವುದಾಗಿ ಹಾಗೂ ಈ ಬಗ್ಗೆ ಬೇಕಿದ್ದಲ್ಲಿ ಗಂಟೆಗಟ್ಟಲೆ ಮಾತನಾಡಲು ತನಗೆ ಸಾಧ್ಯವಿದೆಯೆಂದು ಇಸ್ಲಾಮಿಕ್ ಮತ ಪ್ರಚಾರಕ ಝಾಕಿರ್ ನಾಯ್ಕಾ ಹೇಳಿದ್ದಾರೆ. ಕನಿಷ್ಠ 75 ಮಂದಿ ಪ್ರಾಣ ಕಳೆದುಕೊಂಡಫ್ರಾನ್ಸ್ ನ ನೈಸ್ ನಗರದಲ್ಲಿ ನಡೆದ ಉಗ್ರ ದಾಳಿಯನ್ನೂ ಮುಂಬೈ ಮೂಲದ ಝಾಕಿರ್ ತನ್ನ ಬಹು ನಿರೀಕ್ಷಿತ ಸೌದಿ ಅರೇಬಿಯಾದ ಮದೀನಾ ನಗರದಿಂದ ಸ್ಕೈಪ್ ಮೂಲಕ ನಡೆಸಲಾದ ಪತ್ರಿಕಾ ಗೋಷ್ಠಿ ಆರಂಭವಾಗುವ ಮುನ್ನ ಖಂಡಿಸಿದರು.

ಭಾರತದ ಮುಸ್ಲಿಮ್ ಜನಸಂಖ್ಯೆಯಲ್ಲಿ ಅಶಿಕ್ಷಿತರ ಪ್ರಮಾಣ ಹಾಗೂ ಶಾಲೆಯಿಂದ ಅರ್ಧಕ್ಕೆಹೊರಬಿದ್ದವರ ಸಂಖ್ಯೆ ತಿಳಿದಿದೆಯೇ ಎಂದು ಝೀ ವರದಿಗಾರ ಪ್ರಶ್ನಿಸಿದಾಗ ಸಿಡಿಮಿಡಿಗೊಂಡ ಝಾಕಿರ್ ವರದಿಗಾರನಿಗೆ ‘ತಮೀಝ್’ ಇಲ್ಲವೆಂದು ದೂರಿದರು.

ಭಾರತದಲ್ಲಿ ಎಷ್ಡು ಮುಸ್ಲಿಮರು ಕಂಪೆನಿಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆಂದು ನಿಮಗೆ ಗೊತ್ತಿದೆಯೇ ಎಂದು ವರದಿಗಾರ ರಾಕೇಶ್ ತ್ರಿವೇದಿ ಮತ್ತೆ ಪ್ರಶ್ನಿಸಿದಾಗ ನಾಯ್ಕ್ ಸಂಘಟನೆಯಾದ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಪ್ರತಿನಿಧಿಗಳು ಇಂತಹ ಅಪ್ರಸ್ತುತ ಪ್ರಶ್ನೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಕೇಳುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಈ ಬಾರಿ ಕೋಪಗೊಳ್ಳುವ ಸರದಿ ಪತ್ರಕರ್ತನದ್ದಾಗಿತ್ತು. ನಾಯ್ಕ್ ಬಳಿ ಉತ್ತರ ನೀಡುವಂತೆ ಆತ ಒತ್ತಾಯಿಸಿದಾಗ ‘‘ಇದು ನಿಮ್ಮ ಪತ್ರಿಕಾ ಗೋಷ್ಠಿಯಲ್ಲ. ಅಧ್ಯಕ್ಷರು ನಿಮ್ಮ ಪ್ರಶ್ನೆ ಅಪ್ರಸ್ತುತವೆಂದು ಹೇಳುತ್ತಿದ್ದಾರೆ. ನಿಮಗೆ ಅಧ್ಯಕ್ಷರ ಬಳಿ ಹೇಗೆ ಮಾತನಾಡಬೇಕೆಂಬ ತಮೀಝ್ ಇಲ್ಲದಿದ್ದರೆ ನೀವು ಈ ಪತ್ರಿಕಾ ಗೋಷ್ಠಿಯಲ್ಲಿ ಭಾಗಿಯಾಗಬಾರದು’’ ಎಂದು ಝಾಕಿರ್ ಹೇಳಿದರು.

ಅವರ ಪತ್ರಿಕಾ ಗೋಷ್ಠಿಯ ಮುಖ್ಯಾಂಶಗಳು ಇಂತಿವೆ

► ಮುಗ್ಧರನ್ನು ಕೊಲ್ಲುವ ಆತ್ಮಾಹುತಿ ಬಾಂಬ್ ದಾಳಿಗಳು ಹರಾಮ್. ಆದರೆ ಯುದ್ಧದ ತಂತ್ರವಾಗಿ ಇದನ್ನು ಹಲವಾರು ವಿದ್ವಾಂಸರು ಒಪ್ಪುತ್ತಾರೆ.

► ಟಿವಿಯಲ್ಲಿ ನನ್ನ ವಿರುದ್ಧ ಮಾಡಲಾದ ಎಲ್ಲಾ ಆಪಾದನೆಗಳಿಗೂ ಉತ್ತರವನ್ನು ಎಲ್ಲಾ ವರದಿಗಾರಿಗೆ ಪೆನ್ ಡ್ರೈವ್ ಗಳಲ್ಲಿ ನೀಡಲಾಗಿದೆ.

► ನನ್ನ ಉತ್ತರಗಳನ್ನು ತಿರುಚಲಾಗುತ್ತದೆ ಹಾಗೂ ಜನರನ್ನು ತಪ್ಪು ದಾರಿಗೆಳೆಯಲಾಗುತ್ತಿದೆ. ಹಾಗೆ ಮಾಡುವವರನ್ನು ಜವಾಬ್ದಾರರನ್ನಾಗಿಸಬೇಕು.

► ನಾನು ಯಾವುದೇ ಆತ್ಮಾಹುತಿ ಬಾಂಬ್ ದಾಳಿಯನ್ನು ಖಂಡಿಸದ ನನ್ನ ಎಡಿಟ್ ಮಾಡಲಾಗಿರದ ಯಾವುದಾದರೂ ಉತ್ತರವನ್ನು ತೋರಿಸುವಂತೆ ನಿಮಗೆ ಸವಾಲು ಹಾಕುತ್ತೇನೆ.

► ನೀವೇಕೆ ಅಪ್ರಸ್ತುತವಾದ ಹಾಗೂ ತಿರುಚಲಾದ ವೀಡಿಯೊ ಅಥವಾ ಉತ್ತರವನ್ನು ಅವಲಂಬಿಸಿದ್ದೀರಿ ? ನನ್ನ ಯಾವುದಾದರೂ ಎಡಿಟ್ ಮಾಡದ ಕ್ಲಿಪ್ ಒಂದನ್ನು ತೋರಿಸುವಂತೆ ನಿಮಗೆ ಸವಾಲು ಹಾಕುತ್ತೇನೆ.

►ಕುರಾನ್ ನ 5 ನೇ ಅಧ್ಯಾಯದ32 ನೇ ಪಂಕ್ತಿಯಲ್ಲಿ ಮುಗ್ಧರನ್ನು ಹತ್ಯೆ ಮಾಡುವುದು ಅಪರಾಧವೆಂದು ಹೇಳಲಾಗಿದೆ. ಒಬ್ಬ ಮುಗ್ಧನನ್ನು ಕೊಲ್ಲುವುದು ಮಾನವ ಕುಲವನ್ನೇ ಕೊಲ್ಲುವುದಕ್ಕೆ ಸಮವೆಂದು ಕುರಾನ್ ಹೊರತಾಗಿ ಬೇರೆ ಯಾವ ಗ್ರಂಥವೂ ಹೇಳುವುದಿಲ್ಲ.

► ಇಲ್ಲಿಯ ತನಕ ಯಾವುದೇ ಸರಕಾರಿ ಪ್ರಾಧಿಕಾರ ಯಾವುದೇ ಪ್ರಶ್ನೆಯೊಂದಿಗೆ ನಮ್ಮನ್ನು ಸಂಪರ್ಕಿಸಿಲ್ಲ. ಭಾರತ ಸರಕಾರ ಹಾಗೂ ಅಲ್ಲಿಯ ಪೊಲೀಸರಿಂದ ಇಲ್ಲಿಯ ತನಕ ನನಗೆ ಯಾವುದೇ ಸಮಸ್ಯೆಯಾಗಿಲ್ಲ.

► ಗೊತ್ತಿದ್ದು ನಾನು ಯಾವುದೇ ಉಗ್ರವಾದಿಯನ್ನು ಭೇಟಿಯಾಗಿಲ್ಲ. ಆದರೆ ಕೆಲ ಮಂದಿ ನನ್ನ ಹತ್ತಿರ ನಿಂತುಫೊಟೋ ತೆಗೆದರೆ ಹಾಗೂ ನಕ್ಕರೆ ನನಗೆ ಅವರು ಯಾರೆಂದು ತಿಳಿದಿರುವುದಿಲ್ಲ.

► ನಾನು ಶಾಂತಿಯ ದೂತ. ನಾನು ಇಸ್ಲಾಮ್ ಧರ್ಮದ ಯಾವುದೇ ಪಂಥವನ್ನೂ ಟೀಕಿಸುವುದಿಲ್ಲ, ಆದರೆ ನಾನು ಅವರ ವ್ಯಾಖ್ಯಾನವನ್ನೂ ಒಪ್ಪಲಿಕ್ಕಿಲ್ಲ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News