ಹಾಶಿಮ್‌ಪುರ ಹತ್ಯೆಗಳನ್ನು ಸರಕಾರಿ ಅಧಿಕಾರಿಗಳೇ ಯೋಜಿಸಿದ್ದರು:ಮಾಜಿ ಎಸ್‌ಪಿಯಿಂದ ಬಹಿರಂಗ

Update: 2016-07-15 14:29 GMT

 ಹೊಸದಿಲ್ಲಿ,ಜು.15: 1987ರಲ್ಲಿ ಉತ್ತರ ಪ್ರದೇಶದ ಗಾಝಿಯಾಪುರ ಜಿಲ್ಲೆಯ ಹಾಶಿಮ್‌ಪುರದಲ್ಲಿ ನಡೆದಿದ್ದ 42 ಮುಸ್ಲಿಮ್ ಯುವಕರ ಮಾರಣ ಹೋಮವನ್ನು ಕೆಲವು ಪೊಲೀಸ್ ಮತ್ತು ನಾಗರಿಕ ಅಧಿಕಾರಿಗಳೇ ರೂಪಿಸಿದ್ದರು ಎಂಬ ಆಘಾತಕಾರಿ ಸತ್ಯವನ್ನು ಮಾಜಿ ಹಿರಿಯ ಪೋಲೀಸ್ ಅಧಿಕಾರಿ ವಿಭೂತಿ ನಾರಾಯಣ ರಾಯ್ ಅವರು ತನ್ನ ನೂತನ ಪುಸ್ತಕದಲ್ಲಿ ಬಹಿರಂಗಗೊಳಿಸಿದ್ದಾರೆ.

ಕಾನೂನಿನ ಕೈಗಳಿಂದ ಪಾರು ಮಾಡುವುದಾಗಿ ಅತ್ಯಂತ ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಅಥವಾ ಪ್ರಭಾವಿ ರಾಜಕಾರಣಿಯೋರ್ವರು ಹಂತಕರಿಗೆ ಭರವಸೆ ನೀಡಿರದಿದ್ದರೆ ಈ ಮಾರಣಹೋಮ ನಡೆಯುತ್ತಿರಲಿಲ್ಲ ಎಂದೂ ರಾಯ್ ಹೇಳಿದ್ದಾರೆ.

ಗಾಝಿಯಾಬಾದ್‌ನಲ್ಲಿ ಎಸ್‌ಪಿಯಾಗಿದ್ದ ರಾಯ್ ಅವರು ಪ್ರಾಂತೀಯ ಸಶಸ್ತ್ರ ಪೊಲೀಸ್ ಪಡೆ(ಪಿಎಸಿ)ಯಲ್ಲಿನ ಖೂಳರ ಗುಂಪೊಂದು ಈ ಮಾರಣಹೋಮವನ್ನು ನಡೆಸಿತ್ತು ಎನ್ನುವುದನ್ನು ಪತ್ತೆ ಹಚ್ಚಿದ ಮೊದಲಿಗರಾಗಿದ್ದರು.

1987,ಮೇ 22ರಂದು ರಾತ್ರಿ ಸಮೀಪದ ಮೀರತ್ ಕೋಮು ಹಿಂಸಾಚಾರ ಸುಳಿಯಲ್ಲಿ ನಲುಗುತ್ತಿದ್ದಾಗ ದಿಲ್ಲಿಗೆ ಹೊಂದಿಕೊಂಡಿರುವ ಗಾಝಿಯಾಬಾದ್ ಜಿಲ್ಲೆಯ ನಿರ್ಜನ ಪ್ರದೇಶದಲ್ಲಿ ಈ ಕ್ರೂರ ಹತ್ಯೆಗಳು ನಡೆದಿದ್ದವು.

ಮೇ 21 ಮತ್ತು 22ರಂದು ಕೆಲವು ನಿಗೂಢ ಸಭೆಗಳು ನಡೆದಿದ್ದು, ಕೆಲವು ಸೇನಾಧಿಕಾರಿಗಳೊಂದಿಗೆ ಮೀರತ್‌ನ ಎಲ್ಲ ಹಿರಿಯ ನಾಗರಿಕ ಮತ್ತು ಪೊಲೀಸ್ ಅಧಿಕಾರಿಗಳು ಈ ಸಭೆಗಳಲ್ಲಿ ಭಾಗವಹಿಸಿದ್ದರು ಎಂದು ರಾಯ್ ಇತ್ತೀಚಿಗೆ ಬಿಡುಗಡೆಗೊಂಡಿರುವ ತನ್ನ ‘ಹಾಶಿಮ್‌ಪುರ 22 ಮೇ’ ಪುಸ್ತಕದಲ್ಲಿ ಬರೆದಿದ್ದಾರೆ.

ಬಲಿಪಶುಗಳನ್ನು ಗುರುತಿಸಲು ಮತ್ತು ಅವರನ್ನು ಹತ್ಯೆಗೈಯ್ಯಲು ಎರಡು ಪ್ರತ್ಯೇಕ ಗುಂಪುಗಳನ್ನು ಇದೇ ಸಭೆಗಳಲ್ಲಿ ಅಂತಿಮಗೊಳಿಸಲಾಗಿತ್ತು ಎಂದು ನಾನು ನಂಬಿರುವುದಕ್ಕೆ ಕಾರಣವಿದೆ ಎಂದಿದ್ದಾರೆ.

ಆಗಿನ ಉತ್ತರ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರಿಗೆ ಈ ಹತ್ಯಾಕಾಂಡದ ಬಗ್ಗೆ ಮಾಹಿತಿ ನೀಡಿದ್ದ ರಾಯ್,ಸೈನಿಕರು,ಸಿಆರ್‌ಪಿಎಫ್,ಪಿಎಸಿ ಮತ್ತು ಪೊಲೀಸ್ ಸಿಬ್ಬಂದಿಗಳು ಮೀರತ್‌ನ ಹಾಶಿಮ್‌ಪುರದಲ್ಲಿನ ಮನೆಗಳಿಂದ 600-700ಜನರನ್ನು ಹೊರಗೆಳೆದು ತಂದಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಈ ಪೈಕಿ 40-45 ಯುವಕರನ್ನು ಆಯ್ದು ಪಿಎಸಿ ಟ್ರಕ್‌ನಲ್ಲಿ ತುಂಬಿ ದಿಲ್ಲಿ-ಗಾಜಿಯಾಬಾದ್ ಗಡಿಯಲ್ಲಿನ ಮಾಕನಪುರ ಗ್ರಾಮದ ಬಳಿಯ ನಾಲೆಯತ್ತ ಒಯ್ಯಲಾಗಿತ್ತು ಮತ್ತು 19 ಪಿಎಸಿ ಸಿಬ್ಬಂದಿಗಳು ಅವರನ್ನು ಗುಂಡಿಟ್ಟು ಕೊಂದು ಹಾಕಿದ್ದರು. ಬಳಿಕ ಅಷ್ಟೂ ಶವಗಳನ್ನು ನಾಲೆಗೆ ತಳ್ಳಲಾಗಿತ್ತು.

ಹಂತಕರಿಗೆ ಗೊತ್ತಾಗದೆ ಈ ಮಾರಣಹೋಮದಲ್ಲಿ ಬದುಕುಳಿದಿದ್ದ ಕೈಬೆರಳೆಣಿಯಷ್ಟಿದ್ದ ಕೆಲವರು ರಾತ್ರಿ ಘಟನಾ ಸ್ಥಳವನ್ನು ತಲುಪಿದ್ದ ರಾಯ್ ಮತ್ತು ಅವರ ಪೊಲೀಸ್ ಪಡೆಗೆ ಕರಾಳ ಕಥೆಯ ವಿವರಗಳನ್ನು ನೀಡಿದ್ದರು.

ಇದು ‘ಹಾಶಿಮ್‌ಪುರ್ ಮಾರಣಹೋಮ’ ವೆಂದೇ ಕುಖ್ಯಾತಿ ಪಡೆದಿದ್ದು, ಸ್ವಾತಂತ್ರಾನಂತರ ದೇಶದಲ್ಲಿ ನಡೆದಿರುವ ಅತ್ಯಂತ ದೊಡ್ಡ ಪ್ರಮಾಣದ ಕಸ್ಟಡಿ ಕೊಲೆಗಳಾಗಿವೆ ಎಂದು ರಾಯ್ ಬಣ್ಣಿಸಿದ್ದಾರೆ.

ತನಿಖೆಯನ್ನು ವಹಿಸಿಕೊಂಡಿದ್ದ ಸಿಐಡಿ ಪೊಲೀಸರು ಹಂತಕರ ಪರವಾಗಿಯೇ ವರದಿ ನೀಡಿದ್ದರು ಎಂದು 1975ರಲ್ಲಿ ಐಪಿಎಸ್‌ಗೆ ಸೇರ್ಪಡೆಗೊಂಡು ಭರ್ತಿ 36 ವರ್ಷಗಳ ಸೇವೆ ಸಲ್ಲಿಸಿರುವ ರಾಯ್ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ.

28 ವರ್ಷಗಳ ಬಳಿಕ ಆರೋಪಿಗಳೆಲ್ಲರೂ ಸಾಕ್ಷಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯದಿಂದ ಬಿಡುಗಡೆಗೊಂಡಿದ್ದರು. ಆ ವೇಳೆಗೆ ಹತ್ಯಾಕಾಂಡದ ರೂವಾರಿಯಾಗಿದ್ದ ಪ್ಲಟೂನ್ ಕಮಾಂಡರ್ ಸುರೇಂದ್ರ ಪಾಲ್ ಸಿಂಗ್ ನಿಧನನಾಗಿದ್ದ ಎಂದು ಅವರು ಹೇಳಿದ್ದಾರೆ.

ಹಾಶಿಮ್‌ಪುರ ಸುಮ್ಮನೆ ತಳ್ಳಿಹಾಕುವಂತಹ ಏಕೈಕ ಘಟನೆಯಲ್ಲ. ಅದು ಭಾರತೀಯ ಸಮಾಜದ, ಕೋಮು ಹಿಂಸೆಗೆ ಕಾರಣವಾಗುವ ಮನೋಸ್ಥಿತಿಯೊಳಗೆ ಆಳವಾಗಿ ಬೇರೂರಿರುವ ವಿದ್ಯಮಾನವಾಗಿದೆ ಎಂದರುವ ರಾಯ್,ಪೊಲೀಸರು ಮತ್ತು ಆಡಳಿತಾಧಿಕಾರಿಗಳ ಮನೋಸ್ಥಿತಿ ಹೆಚ್ಚಿನ ಸಂದರ್ಭ ಮುಸ್ಲಿಮರ ವಿರುದ್ಧವಾಗಿಯೇ ಇರುತ್ತದೆ. ಹೆಚ್ಚಿನ ಪೊಲೀಸ್ ಅಧಿಕಾರಿಗಳು ಮತ್ತು ನ್ಯಾಯಾಧೀಶರು ಹಿಂದುಗಳನ್ನು ‘ನಮ್ಮವರು’ ಮತ್ತು ಮುಸ್ಲಿಮರನ್ನು ‘ಅವರು ’ಎಂದೇ ಉಲ್ಲೇಖಿಸುತ್ತಾರೆ. ಭಾರತದಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಕೋಮು ದಂಗೆಗಳು ಮುಸ್ಲಿಮರು ಮತ್ತು ಪೊಲೀಸರ ನಡುವೆ ನಡೆಯುತ್ತವೆಯೇ ಹೊರತು ಹಿಂದುಗಳ ವಿರುದ್ಧವಲ್ಲ ಅಂದರೆ ಅಚ್ಚರಿಯೇನಿಲ್ಲ. ಮುಸ್ಲಿಮರಿಗೆ ಅವರ ಜಾಗ ಯಾವುದೆಂದು ತೋರಿಸಲೆಂದೇ ಹಾಶಿಮ್‌ಪುರ ಸಂಚು ರೂಪುಗೊಂಡಿತ್ತು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News