ಈ ವರ್ಷ ದೋಷಾರೋಪಣ ಪಟ್ಟಿ ಸಲ್ಲಿಕೆ

Update: 2016-07-15 17:55 GMT

ಹೊಸದಿಲ್ಲಿ, ಜು.15: ಆಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ(ಸಿಟ್)ದಿಂದ ತನಿಖೆಯು ಆರಂಭಗೊಂಡಿದ್ದು, ದೋಷಾರೋಪಣ ಪಟ್ಟಿಯನ್ನು ಈ ವರ್ಷವೇ ಸಲ್ಲಿಸುವ ಸಾಧ್ಯತೆಯಿದೆ ಎಂದು ಕೇಂದ್ರವು ಶುಕ್ರವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತು.
 ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರ ನಿವೇದನೆಯನ್ನು ಒಪ್ಪಿಕೊಂಡ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಸಿ.ನಾಗಪ್ಪನ್ ಅವರ ಪೀಠವು, ನ್ಯಾಯಾಲಯದ ಉಸ್ತುವಾರಿಯಲ್ಲಿ ಸಿಟ್ ತನಿಖೆ ನಡೆಸುವಂತೆ ಮತ್ತು ವಿವಿಐಪಿ ಹೆಲಿಕಾಪ್ಟರ್ ಪ್ರಕರಣದಲ್ಲಿ ಇಟಲಿಯ ನ್ಯಾಯಾಲಯವೊಂದರಲ್ಲಿ ಹೆಸರುಗಳು ಪ್ರಸ್ತಾಪಗೊಂಡಿದ್ದ ಕೆಲವು ರಾಜಕೀಯ ನಾಯಕರು ಮತ್ತು ಇತರರ ವಿರುದ್ಧ ದೋಷಾರೋಪಣ ಪಟ್ಟಿಯನ್ನು ದಾಖಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥಗೊಳಿಸಿತು.
ಕಾನೂನಿಗಿಂತ ಯಾರೂ ದೊಡ್ಡವರಲ್ಲ ಮತ್ತು ಪ್ರಕರಣದ ಸಮಗ್ರ ತನಿಖೆಯನ್ನು ನಡೆಸಲಾಗುತ್ತಿದ್ದು, ಅದು ಪೂರ್ಣಗೊಂಡ ಬಳಿಕ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಮಿಶ್ರಾ ವಿಚಾರಣೆ ಸಂದರ್ಭ ತಿಳಿಸಿದರು.
ಇಟಲಿ ನ್ಯಾಯಾಲಯದ ತೀರ್ಪಿನಲ್ಲಿ ಹೆಸರುಗಳು ಪ್ರಸ್ತಾಪಗೊಂಡಿದ್ದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ರಾಜಕೀಯ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿ ವಕೀಲ ಎಂ.ಎಲ್.ಶರ್ಮಾ ಅವರು ಈ ಪಿಐಎಲ್ ಸಲ್ಲಿಸಿದ್ದರು.
12 ವಿವಿಐಪಿ ಹೆಲಿಕಾಪ್ಟರ್‌ಗಳ ಮಾರಾಟ ಒಪ್ಪಂದವನ್ನು ಕುದುರಿಸಲು ಆಗಸ್ಟಾ ವೆಸ್ಟ್‌ಲ್ಯಾಂಡ್ ಭಾರತೀಯರಿಗೆ ಲಂಚವನ್ನು ನೀಡಿತ್ತೆಂಬ ಆರೋಪಗಳಿಗೆ ಸಂಬಂಧಿಸಿದಂತೆ ಸಿಬಿಐ 2013ರಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿತ್ತು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News