ಅಂಬೇಡ್ಕರ್ ಭವನ ಧ್ವಂಸಕ್ಕೆ ಯೆಚೂರಿ ಖಂಡನೆ

Update: 2016-07-16 17:39 GMT

ಮುಂಬೈ, ಜು.16: ಮಧ್ಯ ಮುಂಬೈಯ ದಾದರ್‌ನ ಅಂಬೇಡ್ಕರ್ ಭವನ ಧ್ವಂಸವನ್ನು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಇಂದು ಖಂಡಿಸಿದ್ದಾರೆ. ಈ ವಿಷಯವನ್ನು ರಾಜ್ಯಸಭೆಯ ಮಳೆಗಾಲದ ಅಧಿವೇಶನದಲ್ಲಿ ಪ್ರಸ್ತಾವಿಸಲಾಗುವುದೆಂದು ಅವರು ಹೇಳಿದ್ದಾರೆ.

ಅಂಬೇಡ್ಕರ್ ಭವನವನ್ನು ಕೆಡಹಿರುವುದು ತೀರಾ ವಿಷಾದನೀಯವಾಗಿದೆ. ಅದು ಕೇವಲ ಚಾರಿತ್ರಿಕ ಕಟ್ಟಡವಾಗಿರದೆ, ಪಾರಂಪರಿಕ ಕಟ್ಟಡವೂ ಆಗಿತ್ತು. ಈ ವಿಚಾರವನ್ನು ರಾಜ್ಯ ಸಭೆಯಲ್ಲಿ ಎತ್ತಲಾಗುವುದು. ಕೇವಲ ತಾವು ಮಾತ್ರವಲ್ಲದೆ ಹಲವು ಮಂದಿ ಇದನ್ನು ಪ್ರಸ್ತಾಪಿಸಲಿದ್ದಾರೆಂದು ಇಂದು ಮುಂಜಾನೆ ಕಟ್ಟಡ ಧ್ವಂಸದ ಸ್ಥಳಕ್ಕೆ ಭೇಟಿ ನೀಡಿದ್ದ ಯೆಚೂರಿ ತಿಳಿಸಿದ್ದಾರೆ.
ಅಭಿವೃದ್ಧಿಗಾಗಿ ಭವನವನ್ನು ಕೆಡಹಲಾಗಿದೆಯೆಂಬುದರ ಔಚಿತ್ಯವನ್ನು ಪ್ರಶ್ನಿಸಿದ ಅವರು, ಅವರೇನೇ ಹೇಳಿದರೂ ಅದನ್ನು ನಡೆಸಿರುವ ರೀತಿ ಖಂಡನಾರ್ಹ ಎಂದಿದ್ದಾರೆ.
ಅದು ಚಳವಳಿಯೊಂದರ ಕೇಂದ್ರವಾಗಿತ್ತು. ಅವರು ಜನಾಭಿಪ್ರಾಯ ಸಂಗ್ರಹಿಸಬೇಕಿತ್ತು. ಎಲ್ಲ ಜನರೊಂದಿಗೆ ಮಾತನಾಡಬೇಕಿತ್ತು ಹಾಗೂ ಎಲ್ಲ ಆಯಾಮಗಳನ್ನು ಗಣನೆಗೆ ತೆಗೆದುಕೊಂಡ ಬಳಿಕ ನಿರ್ಧಾರ ಕೈಗೊಳ್ಳಬೇಕಿತ್ತೆಂದು ಯೆಚೂರಿ ಹೇಳಿದ್ದಾರೆ.
ಜು.19ರಂದು ಮಾಜಿ ಸಂಸದ ಪ್ರಕಾಶ್ ಅಂಬೇಡ್ಕರ್ ನಡೆಸಲಿರುವ ಪ್ರತಿಭಟನಾ ರ್ಯಾಲಿಗೆ ಕೈಜೋಡಿಸುವಿರಾ? ಎಂಬ ಪ್ರಶ್ನೆಗೆ, ಅವರು ತನ್ನನ್ನು ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಲು ಆಹ್ವಾನಿಸಿದ್ದಾರೆ. ದಿಲ್ಲಿಯಲ್ಲಿ ಏನಾಗುವುದೋ ನೋಡೋಣ. ಅವಕಾಶ ದೊರೆತರೆ ತಾನು ಖಂಡಿತವಾಗಿಯೂ ಬರುತ್ತೇನೆಂದು ಅವರುತ್ತರಿಸಿದರು.
ಅಂಬೇಡ್ಕರ್ ಭವನ ಹಾಗೂ ಬುದ್ಧ ಭೂಷಣ್ ಮುದ್ರಣಾಲಯಗಳನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಆರಂಭಿಸಿದ್ದರು. ಪೀಪಲ್ಸ್ ಇಂಪ್ರೂಮೆಂಟ್ ಟ್ರಸ್ಟ್ ಅವುಗಳನ್ನು ಜೂನ್‌ನಲ್ಲಿ ಧ್ವಂಸಗೊಳಿಸಿತ್ತು. ಕಟ್ಟಡವು ಶಿಥಿಲವಾಗಿದ್ದುದರಿಂದ ಕೆಡಹಲಾಗಿದೆ. ಅದೇ ಸ್ಥಳದಲ್ಲಿ ಭವ್ಯ ಅಂಬೇಡ್ಕರ್ ಭವನವನ್ನು ನಿರ್ಮಿಸಲಾಗುವುದೆಂದು ಅದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News