ಕಾಶ್ಮೀರ ನಮ್ಮದು,ನಮ್ಮದಾಗಿಯೇ ಇರಲಿದೆ: ಪಾಕಿಸ್ತಾನಕ್ಕೆ ತೀಕ್ಷ್ಣ ಉತ್ತರ ನೀಡಿದ ಸಚಿವ ವಿಕೆ ಸಿಂಗ್

Update: 2016-07-17 13:47 GMT

 ಹೊಸದಿಲ್ಲಿ,ಜುಲೈ 17: ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ ಸೇನೆಯೊಂದಿಗೆ ಘರ್ಷಣೆಯಲ್ಲಿ ಹತ್ಯೆಯಾದ ನಂತರ ಕಾಶ್ಮೀರ ಕಣಿವೆಯ ಸ್ಥಿತಿ ಉದ್ರಿಕ್ತವಾಗಿಯೇ ಮುಂದುವರಿದ್ದಿದ್ದು ಈಗಲೂ ಅಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಕೆಲವರು ಬುರ್ಹಾನ್ ವಾನಿಯನ್ನು ಶಹೀದ್(ಹುತಾತ್ಮ) ಎಂದು ಕರೆಯುತ್ತಿದ್ದು ಇಂತಹವರನ್ನು ಕೇಂದ್ರ ಸಚಿವ ವಿಕೆ ಸಿಂಗ್ ದೇಶದ್ರೋಹಿಗಳೆಂದು ಕರೆದಿದ್ದಾರೆಂದು ವರದಿಯಾಗಿದೆ.

         ವಿಕೆ ಸಿಂಗ್ ತನ್ನ ಫೇಸ್‌ಬುಕ್ ಖಾತೆಯಲ್ಲಿ ಈ ಬಗ್ಗೆ ಬರೆದಿದ್ದು " ಗೆಳೆಯರೇ, ಭಯೋತ್ಪಾದಕರು, ಅಸೂಯೆಪಡುತ್ತಿರುವ ನಮ್ಮ ನೆರೆಯವರು ಮತ್ತು ಈ ದೇಶದಲ್ಲಿದ್ದು ಇದನ್ನು ವಿಧ್ವಂಸ ಮಾಡಲು ಯತ್ನಿಸುವ ದೇಶದ್ರೋಹಿಗಳು ಒಂದೇ ದನಿಯಲ್ಲಿ ಆಲಾಪಿಸುತ್ತಿದ್ದಾರೆ. ಆದರೆ ಅವರ ಕಡೆಯಲ್ಲೇ ಸಂಕಟದ ಕಾರ್ಮೋಡ ಹಬ್ಬಿದೆಯೆಂದು ನಾವು ತಿಳಿದಿರಬೇಕಾಗಿದೆ. ಉಳಿದೆಲ್ಲವನ್ನು ನೀವು ಅರಿತು ಕೊಳ್ಳುವಷ್ಟು ಪ್ರಾಜ್ಞರಾಗಿದ್ದೀರಿ. ಕೆಲವು ಪ್ರಶ್ನೆಗಳಿಗೆ ಉತ್ತರ ಕಾಶ್ಮೀರದ ಜನತೆಯಲ್ಲಿ ಅವರನ್ನು ಯಾರು ದಂಗೆಯೇಳಲು ಪ್ರಚೋದಿಸುತ್ತಿದ್ದಾರೆ ಎಂದು ಕೇಳಬೇಕಾಗಿದೆ ಎಂದು ಫೇಸ್‌ಬುಕ್‌ನಲ್ಲಿ ವಿಕೆ ಸಿಂಗ್ ಬರೆದಿದ್ದಾರೆಂದು ವರದಿಯಾಗಿದೆ.

  "ಕೆಲವರು ಸೇನೆ ಮತ್ತುಪೊಲೀಸ್ ಪಡೆಯನ್ನು ಅಕ್ರಮಿಗಳೆಂದು ಜರೆದು ಪರರಿಗೆ ಹಿಂಸೆ ಕೊಡುವುದರಲ್ಲಿ ಅದು ಸಂತೋಷ ಅನುಭವಿಸುತ್ತದೆ ಎನ್ನುತ್ತಾರೆ. ಆದರೆ ಕಳೆದವರ್ಷ ಜಮ್ಮು ಕಾಶ್ಮೀರದಲ್ಲಿ ನೆರೆಬಂದಾಗ ಸೇನೆ ಕಾಶ್ಮೀರದ ಜನತೆಯ ನೆರವಿಗೆ ಧಾವಿಸಿತ್ತು" ಎಂದು ಸೇನೆಯ ಅಂದಿನ ರಕ್ಷಣಾ ಕಾರ್ಯವನ್ನು ವಿಕೆ ಸಿಂಗ್ ಶ್ಲಾಘಿಸಿದ್ದು " ಸೇನೆಯು ಅಂದು ಮುಳುಗುತ್ತಿರುವ ಕಾಶ್ಮೀರಕ್ಕೆ ಉಸಿರುಕೊಟ್ಟಿತ್ತು. ಅದೇ ಭಾರತೀಯ ಸೇನೆಯ ವಿರುದ್ಧ ದಾಳಿ ಮಾಡಲು ಯುವಕರನ್ನು ಬುರ್ಹಾನ್ ವಾನಿ ಉತ್ತೇಜಿಸುತ್ತಿದ್ದ. ಇವನು ಹುತಾತ್ಮನೇ?" ಎಂದು ವಿಕೆ ಸಿಂಗ್ ಖಾರವಾಗಿ ಪ್ರಶ್ನಿಸಿದ್ದಾರೆ. " ಭಾರತೀಯ ಸೇನೆ ಅವನನ್ನು ಹೊಡೆದುರುಳಿಸಿದೆ ಮತ್ತು ನಮಗೆ ಸೇನೆಯ ಮೇಲೆ ಹೆಮ್ಮೆ ಇದೆ" ಎಂದು ವಿಕೆ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

  "ಕೆಲವರು ಈ ಹಿಂಸೆಯನ್ನು ಮುಂದಿಟ್ಟು ಇವೆಲ್ಲ ಕಾಶ್ಮೀರದಲ್ಲಿ ಜನಮತಗಣನೆ ನಡೆಸದಿದ್ದುದರ ಪರಿಣಾಮ ಎನ್ನುತ್ತಿದ್ದಾರೆ. ಆದರೆ ಭಾರತ ಬಯಸಿದರೂ ಕಾಶ್ಮೀರದಲ್ಲಿ ಜನಮತಗಣನೆ ನಡೆಸುವಂತಿಲ್ಲ. ಯಾಕೆಂದರೆ ವಿಶ್ವಸಂಸ್ಥೆಯ ಕನ್ವೆನ್ಸನ್(ಒಪ್ಪಂದ) ಪ್ರಕಾರ ಪಾಕ್ ಆಕ್ರಮಿತ ಕಾಶ್ಮೀರದಿಂದ ಪಾಕಿಸ್ತಾನದ ಸೇನೆ ಹಿಂದೆ ಸರಿಯಬೇಕೆಂಬುದು ಜನಮತಗಣನೆ ನಡೆಸಲಿಕ್ಕೆ ಅಗತ್ಯವಾದ ಮೊದಲ ಚರಣವಾಗಿದೆ. ಕಾಶ್ಮೀರಿಗಳನ್ನು ಯಾರು ದಾರಿ ತಪ್ಪಿಸುತ್ತಿದ್ದಾರೆ ಮತ್ತು ಯಾಕೆ ಹಾಗೆ ಮಾಡುತ್ತಿದ್ದಾರೆ. ಆದ್ದರಿಂದ ಭಾರತದ ವಿರುದ್ಧ ಆಕ್ರೋಶ ಉಗುಳುತ್ತಿರುವವರು ಸರಿಯಾದ ದಿಕ್ಕಿನಲ್ಲಿ ನಡೆಯಬೇಕಾಗಿದೆ. 1947ರಲ್ಲಿದ್ದ ಸ್ಥಿತಿಯಲ್ಲಿ ಯಾವುದೆ ಬದಲಾವಣೆ ಆಗಿಲ್ಲ ಮತ್ತು ಮುಂದೆ ಕೂಡಾ ಆಗುವುದೂ ಇಲ್ಲ ಎಂದು ಪಾಕಿಸ್ತಾನವನ್ನು ಉದ್ದೇಶಿಸಿ ವಿಕೆ ಸಿಂಗ್ ಫೇಸ್‌ಬುಕ್‌ನಲ್ಲಿ ಕಟು ಟೀಕಾಪ್ರಹಾರವನ್ನು ಹರಿಸಿದ್ದಾರೆಂದು ವರದಿ ತಿಳಿಸಿದೆ.

 “2004ರಲ್ಲಿ ನಮ್ಮ ಪ್ರಧಾನಿ ಭಾರತದ ಗಡಿಯನ್ನು ಬದಲಾಯಿಸುವುದಿಲ್ಲ ಎಂದು ಹೇಳಿದ್ದರು. ಈ ವಸ್ತುಸ್ಥಿತಿಯನ್ನು ಬೇಗನೆ ಸ್ವೀಕರಿಸುವುದು ಎಲ್ಲರಿಗೂ ಉತ್ತಮ" ಎಂದು ವಿಕೆ ಸಿಂಗ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಈ ನಡುವೆ ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಭಾರತ ವಿಫಲವಾಗಿದೆ ಎಂದು ಪಾಕಿಸ್ತಾನ ನಿರಂತರ ಹೇಳಿಕೆಗಳನ್ನು ನೀಡುತ್ತಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News