ಜಿಎಸ್‌ಟಿಗೆ ಸಹಕರಿಸಿ: ವಿಪಕ್ಷಗಳಿಗೆ ಮೋದಿ

Update: 2016-07-17 15:36 GMT

ಕಾವೇರಿದ ವಾತಾವರಣ ಸೃಷ್ಟಿಗೆ ರಂಗ ಸಜ್ಜು

ಹೊಸದಿಲ್ಲಿ,ಜು.17: ಸಂಸತ್ತಿನ ಮಳೆಗಾಲದ ಅಧಿವೇಶನದ ಮುನ್ನಾ ದಿನವಾದ ರವಿವಾರ ಪ್ರಧಾನಿ ನರೇಂದ್ರ ಮೋದಿಯವರು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಮಸೂದೆಯ ಅಂಗೀಕಾರಕ್ಕೆ ಪ್ರತಿಪಕ್ಷದ ಸಹಕಾರವನ್ನು ಕೋರಿದರು. ಇದೇ ವೇಳೆ ಪ್ರತಿಪಕ್ಷವು ಸೋಮವಾರದಿಂದ ಆರಂಭಗೊಳ್ಳುತ್ತಿರುವ ಮಳೆಗಾಲದ ಅಧಿವೇಶನದಲ್ಲಿ ಅರುಣಾಚಲ ಪ್ರದೇಶ ಮತ್ತು ಕಾಶ್ಮೀರಗಳಲ್ಲಿಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಸರಕಾರದ ವಿರುದ್ಧ ದಾಳಿ ನಡೆಸುವ ಸ್ಪಷ್ಟ ಸುಳಿವುಗಳನ್ನು ನೀಡಿತು.

ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಕಾವೇರಿದ ವಾತಾವರಣ ಸೃಷ್ಟಿಗೆ ವೇದಿಕೆ ಸಜ್ಜಾಗುತ್ತಿರುವಂತೆಯೇ ಸ್ಪೀಕರ್ ಸುಮಿತ್ರಾ ಮಹಾಜನ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಮೋದಿ ಅವರು, ಇತರ ಯಾವುದೇ ವಿಷಯಕ್ಕಿಂತ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಪ್ರಾಮುಖ್ಯ ನೀಡುವಂತೆ ಎಲ್ಲ ರಾಜಕೀಯ ಪಕ್ಷಗಳನ್ನು ಆಗ್ರಹಿಸಿದರು. ನಾವು ಜನತೆಯನ್ನು ಮತ್ತು ಪಕ್ಷಗಳನ್ನು ಪ್ರತಿನಿಧಿಸುತ್ತಿದ್ದೇವೆ. ಇತರ ಯಾವುದೇ ವಿಷಯಕ್ಕಿಂತ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಮಹತ್ವ ನೀಡುವುದು ಅಗತ್ಯವಾಗಿದೆ ಎಂದರು.

 ಮಸೂದೆಗಳ ಮಹತ್ವವನ್ನು ಪರಿಗಣಿಸಿ ತಾನು ಅವುಗಳನ್ನು ಬೆಂಬಲಿಸುವುದಾಗಿ ಕಾಂಗ್ರೆಸ್ ಹೇಳಿತಾದರೂ ಜಿಎಸ್‌ಟಿ ಕುರಿತಂತೆ ಯಾವುದೇ ಭರವಸೆಯನ್ನು ಅದು ನೀಡಲಿಲ್ಲ. ತಾನು ವ್ಯಕ್ತಪಡಿಸಿರುವ ಕಳವಳಗಳಿಗೆ ಸರಕಾರವು ಲಿಖಿತ ಸ್ಪಷ್ಟನೆ ನೀಡಿದ ನಂತರವಷ್ಟೇ ತಾನು ಈ ಬಗ್ಗೆ ನಿಲುವೊಂದನ್ನು ತಳೆಯಬಹುದಾಗಿದೆ ಎಂದು ಅದು ಹೇಳಿತು.

 ಅಧಿವೇಶನದಲ್ಲಿ ಜಿಎಸ್‌ಟಿ ಸೇರಿದಂತೆ ಮಹತ್ವದ ಮಸೂದೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಬೆಟ್ಟು ಮಾಡಿದ ಮೋದಿ, ಅರ್ಥಪೂರ್ಣ ಚರ್ಚೆಗಳು ನಡೆಯುತ್ತವೆ ಮತ್ತು ಫಲಪ್ರದವಾದ ತೀರ್ಮಾನಗಳು ಮೂಡಿ ಬರುತ್ತವೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಾಶ್ಮೀರದಲ್ಲಿ ಮುಂದುವರಿಯುತ್ತಿರುವ ಪ್ರತಿಭಟನೆಗಳು ಸಂಸತ್ತಿನಲ್ಲಿ ಸಾಕಷ್ಟು ಕಾವನ್ನು ಹುಟ್ಟಿಸಲಿವೆ ಎಂದು ನಿರೀಕ್ಷಿಸಲಾಗಿದ್ದು, ಮೋದಿ ಅವರು ವಾನಿ ವಿಷಯದಲ್ಲಿ ಒಮ್ಮತದಿಂದ ಮಾತನಾಡಿದ್ದಕ್ಕಾಗಿ ರಾಜಕೀಯ ಪಕ್ಷಗಳನ್ನು ಪ್ರಶಂಸಿಸಿದರು.

ಕಾಶ್ಮೀರ ಘಟನಾವಳಿಗಳ ಬಗ್ಗೆ ವಿವಿಧ ಪಕ್ಷಗಳು ಹೇಳಿಕೆಗಳನ್ನು ನೀಡಿವೆ ಮತ್ತು ಇದರಿಂದ ರಾಷ್ಟ್ರಕ್ಕೆ ಲಾಭವಾಗಿದೆ. ಇದು ಸರಿಯಾದ ಸಂದೇಶವನ್ನು ರವಾನಿಸಿದೆ ಮತ್ತು ಇದಕ್ಕಾಗಿ ಎಲ್ಲ ಪಕ್ಷಗಳಿಗೆ ನನ್ನ ಧನ್ಯವಾದಗಳು ಎಂದು ಪ್ರಧಾನಿ ನುಡಿದರು.

ಕಾಶ್ಮೀರದಲ್ಲಿಯ ಉದ್ವಿಗ್ನ ಸ್ಥಿತಿಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು ಮತ್ತು ಸರಕಾರವು ಉತ್ತರವನ್ನು ನೀಡಬೇಕು ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಅವರು ಹೇಳಿದರು.

ಸಭೆಯಲ್ಲಿ ಪ್ರತಿಪಕ್ಷ ನಾಯಕರು ಎತ್ತಿದ ವಿಷಯಗಳಲ್ಲಿ ಎನ್‌ಎಸ್‌ಜಿಗೆ ಸೇರಲು ವಿಫಲ ಯತ್ನ, ಕೆಲವು ರಾಜ್ಯಗಳಲ್ಲಿ ನೆರೆ ಸ್ಥಿತಿ, ಕೃಷಿ ಬಿಕ್ಕಟ್ಟು ಮತ್ತು ಭೀತಿವಾದ ಇವೂ ಸೇರಿದ್ದವು.

ಇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಸರಕಾರಗಳನ್ನು ಅಸ್ಥಿರಗೊಳಿಸಲು ಕೇಂದ್ರವು ಪ್ರತಿಯೊಂದೂ ತಂತ್ರವನ್ನು ಬಳಸುತ್ತಿದೆ ಎಂದು ಆರೋಪಿಸಿದ ಅವರು, ಅರುಣಾಚಲ ಪ್ರದೇಶದಲ್ಲಿಯ ಬೆಳವಣಿಗೆಗಳನ್ನು ಪ್ರಸ್ತಾಪಿಸಿದರು.

ಜಿಎಸ್‌ಟಿ ಮಸೂದೆಯನ್ನು ಮಂಡಿಸಿದ ಶ್ರೇಯಸ್ಸು ಯಾವ ಸರಕಾರಕ್ಕೆ ಸೇರುತ್ತದೆ ಎನ್ನುವುದು ಮುಖ್ಯವಲ್ಲ,ಮಸೂದೆಯು ಅಂಗೀಕಾರಗೊಳ್ಳುವುದು ಮುಖ್ಯವಾಗಿದೆ.

* ಪ್ರಧಾನಿ ನರೇಂದ್ರ ಮೋದಿ

ಯಾವುದೇ ಮಸೂದೆಗೆ ತಡೆಯೊಡ್ಡುವ ಯಾವುದೇ ನಿರ್ಧಾರವನ್ನು ನಾವು ತೆಗೆದುಕೊಂಡಿಲ್ಲ. ಮಸೂದೆಯ ಮಹತ್ವದ ಆಧಾರದಲ್ಲಿ ಅದನ್ನು ನಾವು ಬೆಂಬಲಿಸುತ್ತೇವೆ. ಜನತೆ,ಪ್ರಗತಿ ಮತ್ತು ಬೆಳವಣಿಗೆಯನ್ನು ಬೆಂಬಲಿಸುವ ಯಾವುದೇ ಮಸೂದೆಗೆ ನಮ್ಮ ಬೆಂಬಲವಿದೆ.

* ಗುಲಾಂ ನಬಿ ಆಝಾದ್,ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ

ಜಿಎಸ್‌ಟಿ ಕುರಿತು ಒಮ್ಮತ ಮೂಡಿಸಲು ಸರಕಾರವು ಎಲ್ಲ ಪಕ್ಷಗಳೊಂದಿಗೆ ಮಾತುಕತೆ ನಡೆಸಲಿದೆ.

* ಅನಂತ ಕುಮಾರ,ಸಂಸದೀಯ ವ್ಯವಹಾರಗಳ ಸಚಿವರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News