ಹೈದರಾಬಾದ್ ಉಚ್ಚ ನ್ಯಾಯಾಲಯದಲ್ಲಿ ದೇಶದ ಮೊದಲ ಇ-ನ್ಯಾಯಾಲಯ ಆರಂಭ

Update: 2016-07-17 18:23 GMT

ಹೈದರಾಬಾದ್,ಜು.17: ತೆಲಂಗಾಣ ಮತ್ತು ಆಂಧ್ರಪ್ರದೇಶಗಳ ವ್ಯಾಪ್ತಿಯನ್ನು ಹೊಂದಿರುವ ಹೈದರಾಬಾದ್ ಉಚ್ಚ ನ್ಯಾಯಾಲಯದಲ್ಲಿ ದೇಶದ ಮೊದಲ ಇ-ನ್ಯಾಯಾಲಯವು ರವಿವಾರ ಆರಂಭಗೊಂಡಿತು.
ಇ-ನ್ಯಾಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಮದನ ಬಿ.ಲೋಕೂರ್ ಅವರು, ತೆಲಂಗಾಣ ಮತ್ತು ಆಂಧ್ರಪ್ರದೇಶ ಏಕೀಕೃತ ಕ್ರಿಮಿನಲ್ ನ್ಯಾಯ ವ್ಯವಸ್ಥೆ(ಐಸಿಜೆಎಸ್) ಯೋಜನೆಗೆ ಆಯ್ಕೆಯಾಗಿರುವ ದೇಶದ ಮೊದಲ ಎರಡು ರಾಜ್ಯಗಳಾಗಿವೆ ಎಂದರು.
ಉಭಯ ರಾಜ್ಯಗಳು ತಂತ್ರಜ್ಞಾನದಲ್ಲಿ ಬಹಳಷ್ಟು ಪ್ರಗತಿಯನ್ನು ಸಾಧಿಸಿವೆ ಮತ್ತು ಇದು ಐಸಿಜೆಎಸ್ ಆರಂಭಿಸುವ ನಿರ್ಧಾರಕ್ಕೆ ಕಾರಣಗಳಲ್ಲೊಂದಾಗಿದೆ ಎಂದು ಅವರು ಹೇಳಿದರು. ಐಸಿಜೆಎಸ್ ಪೊಲೀಸ್ ಠಾಣೆಗಳನ್ನು ನ್ಯಾಯಾಲಯಗಳು, ಜೈಲುಗಳು, ಪ್ರಾಸಿಕ್ಯೂಷನ್ ಮತ್ತು ವಿಧಿವಿಜ್ಞಾನ ಪ್ರಯೋಗಶಾಲೆಗಳೊಂದಿಗೆ ಸಮನ್ವಯಗೊಳಿಸಲಿದೆ.
ಜು.28ರಂದು ನಡೆಯಲಿರುವ ಸಭೆಯಲ್ಲಿ ಈ ವ್ಯವಸ್ಥೆಯ ವಿಧಿವಿಧಾನಗಳನ್ನು ರೂಪಿಸಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯದ ಇ-ಸಮಿತಿಯ ಅಧ್ಯಕ್ಷರೂ ಆಗಿರುವ ನ್ಯಾ.ಲೋಕೂರ್ ತಿಳಿಸಿದರು. ಹೈದರಾಬಾದ್‌ನ ಇ-ನ್ಯಾಯಾಲಯದಿಂದ ತಾನು ಪ್ರಭಾವಿತನಾಗಿದ್ದೇನೆ ಎಂದರು.
 ಇ-ನ್ಯಾಯಾಲಯ ಸಂಪೂರ್ಣ ಗಣಕೀಕರಣಗೊಂಡಿದೆ ಮಾತ್ರವಲ್ಲ,ಅದು ಕಾಗದ ರಹಿತ ನ್ಯಾಯಾಲಯವೂ ಆಗಿದೆ. ಇದು ಅತ್ಯಂತ ಬಳಕೆದಾರ ಸ್ನೇಹಿ ವ್ಯವಸ್ಥೆಯಾಗಿದೆ ಎಂದ, ಅವರು ಇದನ್ನು ಬಳಸಿಕೊಳ್ಳುವಂತೆ ತಾನು ಎಲ್ಲ ನ್ಯಾಯಾಧೀಶರನ್ನು ಉತ್ತೇಜಿಸುತ್ತೇನೆ ಎಂದರು. ಮುಂದಿನ ವಾರ ಸರ್ವೋಚ್ಚ ನ್ಯಾಯಾಲಯದಲ್ಲಿಯೂ ಇದನ್ನು ಪ್ರಯತ್ನಿಸಲಾಗುವುದು. ಅಲ್ಲಿ ಇದು ಯಶಸ್ವಿಯಾದರೆ ಅದರ ಹೆಗ್ಗಳಿಕೆ ತೆಲಂಗಾಣ ಮತ್ತು ಆಂಧ್ರಪ್ರದೇಶ ಉಚ್ಚ ನ್ಯಾಯಾಲಯಕ್ಕೇ ಸಲ್ಲುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News