ವಿಶ್ವ ಪರಂಪರೆ ಪಟ್ಟಿಗೆ ನಳಂದಾ

Update: 2016-07-17 18:26 GMT

ಪಟ್ನಾ/ ಹೊಸದಿಲ್ಲಿ, ಜು.17: ಬಿಹಾರದಲ್ಲಿರುವ ಐತಿಹಾಸಿಕ ನಳಂದಾ ವಿಶ್ವವಿದ್ಯಾನಿಲಯದ ಪ್ರಾಚೀನ ಅವಶೇಷಗಳು ಯುನೆಸ್ಕೊ ವಿಶ್ವಪರಂಪರೆ ತಾಣದಲ್ಲಿ ಸೇರಲು ಕೆಲವು ಅಡೆ ತಡೆಗಳು ಎದುರಾಗಿವೆ. ಆದರೆ ಇವುಗಳನ್ನು ಯಶಸ್ವಿಯಾಗಿ ನಿವಾರಿಸುವ ವಿಶ್ವಾಸವನ್ನು ಭಾರತದ ಪ್ರಾಚ್ಯಶಾಸ್ತ್ರ ವಿಭಾಗ ವ್ಯಕ್ತಪಡಿಸಿದೆ.

ಈ ಪ್ರಾಚ್ಯ ಕಲಿಕಾ ತಾಣವನ್ನು ಶುಕ್ರವಾರ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲಾಗಿದೆ. ಆದರೆ ಇದನ್ನು ಈ ಪಟ್ಟಿಗೆ ನಾಮನಿರ್ದೇಶನ ಮಾಡುವ ಕುರಿತ 200 ಪುಟದ ವರದಿಯಲ್ಲಿ ಐಸಿಓಎಂಓಎಸ್ ಪಟ್ಟಿಮಾಡಿದ ದೌರ್ಬಲ್ಯಗಳನ್ನು ಸರಿಪಡಿಸಿ, ತೀರ್ಪುಗಾರರನ್ನು ಮನವೊಲಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ಬಿಹಾರ ಸರಕಾರ ಶಕ್ತಿಮೀರಿ ಕೆಲಸ ಮಾಡಬೇಕಾಗಿದೆ ಎಂದು ಮೂಲಗಳು ಹೇಳಿವೆ.

ನಳಂದಾ ವಿಶ್ವವಿದ್ಯಾನಿಲಯದ ಜೊತೆಗೆ ಚೀನಾ, ಇರಾನ್ ಹಾಗೂ ಮೈಕ್ರೋನೇಶಿಯಾದ ಮೂರು ತಾಣಗಳನ್ನು ಕೂಡಾ ಈ ಪಟ್ಟಿಗೆ ಸೇರಲು ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದ ವಿಶ್ವ ಪರಂಪರೆ ಸಮಿತಿಯ 40ನೆ ಅಧಿವೇಶನದಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು.

ಐಸಿಓಎಂಓಎಸ್ ತನ್ನ ಶಿಫಾರಸಿನಲ್ಲಿ ನಾಮನಿರ್ದೇಶನ ಗೊಂಡ ಆಸ್ತಿಯನ್ನು ಉತ್ತಮವಾಗಿ ರೂಪಿಸುವ ಮೂಲಕ ಅದರ ಮಹತ್ವಕ್ಕೆ ಅನುಗುಣವಾಗಿ ಆಳವಾದ ಅಧ್ಯಯನ ನಡೆಸುವಂತೆ ಭಾರತಕ್ಕೆ ಸೂಚಿಸಿತ್ತು. ಜೊತೆಗೆ ಪಟ್ಟಿಗೆ ಈ ತಾಣವನ್ನು ತಡೆಹಿಡಿಯುವಂತೆಯೂ ಸೂಚಿಸಿತ್ತು ಎಂದು ಮೂಲಗಳು ಹೇಳಿವೆ. ನಾಮಕರಣ ಶಿಫಾರಸಿನ ಲೇಖನವನ್ನು ನಳಂದಾಮಹಾವಿಹಾರದಿಂದ ಉತ್ಖನನ ಮಾಡಿದ ಅವಶೇಷಗಳು ಎಂಬ ಬದಲಾಗಿ ನಳಂದಾ ಮಹಾವಿಹಾದ ಪ್ರಾಚ್ಯವಸ್ತು ತಾಣ ಎಂಬುದಾಗಿ ಬದಲಿಸುವಂತೆಯೂ ಸೂಚಿಸಲಾಗಿದೆ ಎಂದು ಮೂಲಗಳು ವಿವರಿಸಿವೆ.

ಅಂತಾರಾಷ್ಟ್ರೀಯ ಸ್ಮಾರಕ ಮತ್ತು ತಾಣಗಳ ಮಂಡಳಿ (ಐಸಿಓಎಂಓಎಸ್) 1965ರಲ್ಲಿ ಆರಂಭವಾಗಿದ್ದು, ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರುವ ಸ್ಥಳಗಳ ಸಾಂಸ್ಕೃತಿಕ ಹಾಗೂ ಸಮ್ಮಿಶ್ರ ಆಸ್ತಿಗಳನ್ನು ಮೌಲ್ಯಮಾಪನ ನೀಡುವ ಕಾರ್ಯವನ್ನು ಮಾಡುತ್ತದೆ.

ಕಳೆದ ಆಗಸ್ಟ್‌ನಲ್ಲಿ ಐಸಿಓಎಂಓಎಸ್ ತಂಡದ ತಜ್ಞರು ನಳಂದ ವಿವಿಗೆ ಭೇಟಿ ನೀಡಿ, ಭಾರತದ ಪ್ರತಿಪಾದನೆಯ ಮೌಲ್ಯಮಾಪನ ಮಾಡಿತ್ತು. ಎಎಸ್‌ಐ ಮೇಲ್ವಿಚಾರಣೆಯಲ್ಲಿ ಪ್ಯಾರಿಸ್ ಮೂಲದ ಸ್ವಯಂಸೇವಾ ಸಂಸ್ಥೆಯೊಂದು, ಇಸ್ತಾಂಬುಲ್ ಸಭೆಗೆ ಮುನ್ನವೇ ಪ್ರಸ್ತಾವನೆ ಸಲ್ಲಿಸಲು ಸಲಹೆ ನೀಡಲು ಮುಂದೆ ಬಂದಿತ್ತು. ಆದರೆ ನಳಂದಾ ಯುನೆಸ್ಕೊ ವಿಶ್ವಪರಂಪರೆಯ ತಾಣಗಳ ಪಟ್ಟಿಗೆ ಸೇರುತ್ತದೆ ಎಂಬ ವಿಶ್ವಾಸವನ್ನು ಭಾರತದ ಪ್ರಾಚ್ಯವಸ್ತು ಸರ್ವೇಕ್ಷಣಾಲಯ ವ್ಯಕ್ತಪಡಿಸಿದೆ.

ಇದನ್ನು ಸಾಧಿಸುವ ವಿಶ್ವಾಸ ನಮಗೆ ಮೊದಲ ದಿನದಿಂದಲೂ ಇತ್ತು. ನಮ್ಮ ಪ್ರತಿಪಾದನೆ ಪ್ರಬಲವಾಗಿದೆ ಮತ್ತು ಪ್ರಸ್ತಾವನೆ ನಮಗೆ ಅದನ್ನು ದೊರಕಿಸಿಕೊಡಲು ಯಶಸ್ವಿಯಾಗುತ್ತದೆ. ಐಸಿಓಎಂಓಎಸ್ ನೀಡಿದ ಸಲಹೆಗಳ ಬಗ್ಗೆ ನಾವು ತಲೆ ಕೆಡಿಸಿಕೊಂಡಿಲ್ಲ ಎಂದು ಎಎಸ್‌ಐ ಮಹಾನಿರ್ದೇಶಕ ರಾಕೇಶ್ ತಿವಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News