ಮಧ್ಯಪ್ರದೇಶದಲ್ಲಿ ನೆರೆಗೆ 35 ಜನರು ಬಲಿ

Update: 2016-07-17 18:27 GMT

ಭೋಪಾಲ್,ಜು.17: ಮಧ್ಯಪ್ರದೇಶದಲ್ಲಿ ನೆರೆ ಹಾವಳಿಯಿಂದ ಮೂರು ಲಕ್ಷಕ್ಕೂ ಅಧಿಕ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪೈಕಿ ಸುಮಾರು 8,000 ಜನರು ಜಲಾವೃತಗೊಂಡಿರುವ ತಮ್ಮ ಮನೆಗಳನ್ನು ತೊರೆದು ರಾಜ್ಯ ಸರಕಾರವು ಒದಗಿಸಿರುವ ತಾತ್ಕಾಲಿಕ ಶಿಬಿರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ನೆರೆಯಿಂದಾಗಿ ಸುಮಾರು 2,500 ಮನೆಗಳಿಗೆ ತೀವ್ರ ಹಾನಿಯುಂಟಾಗಿದೆ ಎಂದು ಅಧಿಕೃತ ಮಾಹಿತಿಯು ತಿಳಿಸಿದೆ.
ರಾಜ್ಯದ 51 ಜಿಲ್ಲೆಗಳ ಪೈಕಿ 23 ಜಿಲ್ಲೆಗಳು ನೆರೆ ಪ್ರಕೋಪಕ್ಕೆ ಸಿಲುಕಿವೆ.
ಜೂನ್ 1-ಜುಲೈ 16ರ ಅವಧಿಯಲ್ಲಿ 33 ಜಿಲ್ಲೆಗಳಲ್ಲಿ ಸರಾಸರಿಗಿಂತ ಹೆಚ್ಚು ಮಳೆಯಾಗಿದ್ದರೆ,14 ಜಿಲ್ಲೆಗಳಲ್ಲಿ ಸರಾಸರಿ ಮಳೆಯಾಗಿದೆ. ನಾಲ್ಕು ಜಿಲ್ಲೆಗಳಲ್ಲಿ ಸರಾಸರಿಗಿಂತ ಕಡಿಮೆ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ನೆರೆ ಹಾವಳಿಯಿಂದಾಗಿ ರಾಜಧಾನಿ ಭೋಪಾಲದಲ್ಲಿ ಅತ್ಯಂತ ಹೆಚ್ಚಿನ ಜನರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಇಲ್ಲಿ ಐದು ಜೀವಗಳು ಬಲಿಯಾಗಿವೆ. ಪನ್ನಾ ಮತ್ತು ಜಬಲ್ಪುರ ಜಿಲ್ಲೆಗಳಲ್ಲಿ ತಲಾ ಏಳು ಸಾವುಗಳು ಸಂಭವಿಸಿವೆ.
ನಾಪತ್ತೆಯಾಗಿರುವ ಒಂಬತ್ತು ಜನರಲ್ಲಿ ರೇವಾ ಜಿಲ್ಲೆಯಲ್ಲಿ ತುಂಬಿಹರಿಯುತ್ತಿರುವ ತಮ್ಸಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವ ಐವರು ಯುವಕರು ಸೇರಿದ್ದಾರೆ. ಈ ನತದೃಷ್ಟರು ಪ್ರವಾಸಕ್ಕೆಂದು ಅಲ್ಲಿಗೆ ತೆರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News