ವಿಮಾನ ರದ್ದು, ಪ್ರಯಾಣಕ್ಕೆ ಅವಕಾಶ ನೀಡದಿದ್ದರೆ ಇನ್ನು ಪ್ರಯಾಣಿಕರಿಗೆ ಸಿಗಲಿದೆ ದೊಡ್ಡ ಪರಿಹಾರ

Update: 2016-07-18 03:24 GMT

ಹೊಸದಿಲ್ಲಿ, ಜು.18: ವಿಮಾನ ರದ್ದು ಅಥವಾ ವಿಮಾನಯಾನ ಸಂಸ್ಥೆಗಳು ಪ್ರಯಾಣಕ್ಕೆ ಅವಕಾಶ ನೀಡದ ಸಂದರ್ಭದಲ್ಲಿ ಇನ್ನು ಪ್ರಯಾಣಿಕರಿಗೆ ದೊಡ್ಡ ಪರಿಹಾರ ಸಿಗಲಿದೆ. ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ನೂತನ ಮಾರ್ಗಸೂಚಿ ಅನ್ವಯ ಇದೀಗ ಇಂಥ ಪ್ರಕರಣಗಳು ಏರ್‌ಲೈನ್ಸ್‌ಗಳಿಗೆ ದುಬಾರಿಯಾಗಿ ಪರಿಣಮಿಸಲಿವೆ.

ಆಗಸ್ಟ್ 1ರಿಂದ ಜಾರಿಗೆ ಬರುವ ಪರಿಷ್ಕೃತ ಪರಿಹಾರ ನಿಯಮಾವಳಿ ಅನ್ವಯ, ನಿಗದಿತ ಸಮಯಕ್ಕಿಂತ ಎರಡು ಗಂಟೆಗಿಂತ ಹೆಚ್ಚು ವಿಳಂಬವಾಗಿ ವಿಮಾನ ಹಾರಿದರೆ ಅಥವಾ ವಿಮಾನ ಹಾರಾಟ ರದ್ದಾದರೆ ಏರ್‌ಲೈನ್ಸ್‌ಗಳು ಪ್ರಯಾಣಿಕರಿಗೆ 10 ಸಾವಿರ ರೂ.ವರೆಗೂ ಪರಿಹಾರ ನೀಡಬೇಕಾಗುತ್ತದೆ. ಪ್ರಯಾಣಿಕರಿಗೆ ವಿಮಾನಯಾನಕ್ಕೆ ಅವಕಾಶ ನಿರಾಕರಿಸಿದರೆ 20 ಸಾವಿರವರೆಗೂ ಪರಿಹಾರ ನೀಡಬೇಕಾಗುತ್ತದೆ. ಇದೀಗ ಏರ್‌ಲೈನ್ಸ್‌ಗಳು ಇಂಥ ಎರಡೂ ಪ್ರಕರಣಗಳಲ್ಲಿ ಕೇವಲ 4 ಸಾವಿರ ರೂ.ಪರಿಹಾರ ನೀಡುತ್ತವೆ. ಏರ್‌ಲೈನ್ಸ್ ಸೇರಿದಂತೆ ಎಲ್ಲ ಸಂಬಂಧಪಟ್ಟವರ ಜತೆ ಚರ್ಚೆ ನಡೆಸಿಯೇ ಹೊಸ ನಿಯಮಾವಳಿ ರೂಪಿಸಲಾಗಿದೆ.

ಆದರೆ ಭಾರತೀಯ ವಿಮಾನ ಪ್ರಯಾಣಿಕರ ಸಂಘದ ಸಂಸ್ಥಾಪಕ ಮತ್ತು ಅಧ್ಯಕ್ಷ ಡಿ.ಸುಧಾಕರ ರೆಡ್ಡಿ ಹೇಳುವಂತೆ ಇನ್ನೂ ಕೆಲ ಇತಿಮಿತಿಗಳು ಈ ನಿಯಮಾವಳಿಯಲ್ಲಿದ್ದು, ಅವುಗಳನ್ನು ಸರಿಪಡಿಸುವುದು ಅಗತ್ಯ.

ವಿಮಾನ ಒಂದು ಗಂಟೆ ವಿಳಂಬ ಅಥವಾ ರದ್ದಾದ ಸಂದರ್ಭದಲ್ಲಿ ವಿಮಾನಯಾನ ಕಂಪೆನಿಗಳು ಟಿಕೆಟ್ ಹಣ ಪರುಪಾವತಿ ಜೊತೆಗೆ ಕನಿಷ್ಠ 5,000 ರೂ. ಅಥವಾ ಒಂದು ಪ್ರಯಾಣದ ಮೂಲದರ ಹಾಗೂ ಇಂಧನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎರಡು ಗಂಟೆಯವರೆಗಿನ ವಿಳಂಬಕ್ಕೆ ದಂಡದ ಪ್ರಮಾಣ ಕನಿಷ್ಠ 7,500 ರೂಪಾಯಿ ಆಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News