ರಾಜಸ್ಥಾನ ಪಠ್ಯಪುಸ್ತಕಗಳಲ್ಲಿ ಲಿಂಗ ತಾರತಮ್ಯದ ಅಂಶಗಳು: ತಜ್ಞರ ಆರೋಪ

Update: 2016-07-18 03:34 GMT

ಜೈಪುರ, ಜು.18: ರಾಜಸ್ಥಾನದ ಪರಿಷ್ಕೃತ ಪಠ್ಯಪುಸ್ತಕಗಳಲ್ಲಿ ಲಿಂಗ ತಾರತಮ್ಯದ ಅಂಶಗಳು ವ್ಯಾಪಕವಾಗಿ ಇವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಮ್ಮ ಸಮಾಜದಲ್ಲಿ ಇರುವ ಲಿಂಗ ತಾರತಮ್ಯವನ್ನು ಇಂಗ್ಲಿಷ್ ಹಾಗೂ ಹಿಂದಿ ಪಠ್ಯಗಳು ಪ್ರಚಾರ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂರನೆ ತರಗತಿಯ ಹಿಂದಿ ಪಠ್ಯದ ಗೇಮ್ಸ್ ಎಂಬ ಅಧ್ಯಾಯದಲ್ಲಿ, ಬಾಲಕರು ಮಾತ್ರ ಆಟವಾಡುತ್ತಿರುವ ಚಿತ್ರ ಇದೆ. ಕ್ರೀಡೆ ಕೇವಲ ಹುಡುಗರಿಗಷ್ಟೇ ಸೀಮಿತ ಎಂಬ ಭಾವನೆಯನ್ನು ಇದು ಮೂಡಿಸುತ್ತದೆ. ಬಹುತೇಕ ಅಧ್ಯಾಯಗಳಲ್ಲಿ ಪುರುಷರನ್ನು ಹೆಸರಿಸಿದ ಬಳಿಕ ಮಹಿಳೆಯರ ಉಲ್ಲೇಖವಿದೆ ಎಂದು ಶಿಕ್ಷಣ ತಜ್ಞರು ಸಿದ್ಧಪಡಿಸಿದ ವರದಿಯಲ್ಲಿ ಹೇಳಲಾಗಿದೆ.

ಹಿಂದಿನ ಪಠ್ಯಗಳಲ್ಲಿ ಎಲ್ಲ ಚಿತ್ರಗಳಲ್ಲೂ ಸಮಾನವಲ್ಲದಿದ್ದರೂ ಹುಡುಗಿಯರಿಗೆ ಕೂಡಾ ಪ್ರಾತಿನಿಧ್ಯ ಇತ್ತು ಎಂದು ಪುಸ್ತಕ ಪರಿಶೀಲಿಸಿರುವ ದೇವಯಾನಿ ಭಾರಧ್ವಾಜ್ ಹೇಳುತ್ತಾರೆ.

ಆರನೆ ತರಗತಿಯ ಪಠ್ಯದಲ್ಲಿರುವ ಸಿಂಧಿ ಕವಿ ಸಂತ ಕನ್ವರ್ ರಾಮ್ ಅಧ್ಯಾಯದಲ್ಲಿ, ಮಹಿಳೆಯರ ಕರ್ತವ್ಯ ಪುರುಷರನ್ನು ಅನುಸರಿಸುವುದು ಎಂದು ಹೇಳಲಾಗಿದೆ. ಈ ಕವಿ ಇಬ್ಬರು ಪತ್ನಿಯರಿಂದ ಆರು ಮಕ್ಕಳನ್ನು ಹೊಂದಿದ್ದರು. ಮೊದಲ ಪತ್ನಿ ಮೃತಪಟ್ಟ ಬಳಿಕ 46ನೆ ವಯಸ್ಸಿನಲ್ಲಿ ಎರಡು ಬಾರಿ ಮದುವೆಯಾದರು ಎಂಬ ಉಲ್ಲೇಖವಿದೆ. ಇಡೀ ಅಧ್ಯಾಯ ಪುರುಷ ಪ್ರಧಾನವಾಗಿದ್ದು, ಮಹಿಳೆಯರ ಕೆಲಸ ಕೇವಲ ಮಕ್ಕಳನ್ನು ಹೆರುವುದು ಎಂದು ಬಿಂಬಿಸಿದೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News