ಈ 'ಎಟಿಎಂ' ನಲ್ಲಿ ತಾಯಿಯ ಹಾಲು ಲಭ್ಯ !

Update: 2016-07-19 04:19 GMT

ಪುದುಚೇರಿ, ಜು.19: ಇಲ್ಲಿನ ಜವಾಹರಲಾಲ್ ಇನ್‌ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜ್ಯುಯೇಟ್ ಮೆಡಿಕಲ್ ಎಜ್ಯುಕೇಶನ್ ಆ್ಯಂಡ್ ರಿಸರ್ಚ್ (ಜಿಪ್‌ಮೇರ್) ಸಂಸ್ಥೆಯು ತಾಯಂದಿರ ಹಾಲಿನ ಬ್ಯಾಂಕ್ ಆರಂಭಿಸಿದ್ದು, ಆಸ್ಪತ್ರೆಯಲ್ಲಿ ಹುಟ್ಟುವ ಅವಧಿಪೂರ್ವ ಶಿಶುಗಳನ್ನು ರಕ್ಷಿಸುವ ಸಲುವಾಗಿ ಈ ಕ್ರಮಕ್ಕೆ ಮುಂದಾಗಿದೆ.

ಈ ಬ್ಯಾಂಕಿಗೆ ಅಮುಧಮ್ ತಾಯಿಪ್ಪಾಲ್ ಮಲ್ಯಂ (ಎಟಿಎಂ) ಎಂದು ಹೆಸರಿಸಲಾಗಿದೆ. ಇದು ಮೊಲೆಹಾಲುಣಿಸುವ ಸರಿಯಾದ ಕ್ರಮಗಳ ಬಗ್ಗೆಯೂ ತಾಯಂದಿರಿಗೆ ಸಲಹೆ ನೀಡುತ್ತದೆ. ಬುಧವಾರ ಈ ವಿಶಿಷ್ಟ ಎಟಿಎಂ ಉದ್ಘಾಟನೆಯಾಗಿದೆ.

ಪ್ರತಿ ತಿಂಗಳು ಜಿಪ್‌ಮೇರ್‌ನಲ್ಲಿ ಹುಟ್ಟುವ 1,500 ಮಕ್ಕಳ ಪೈಕಿ ಕನಿಷ್ಠ ಶೇ. 30ರಷ್ಟು ಶಿಶುಗಳು, ಕಡಿಮೆ ತೂಕ ಹೊಂದಿರುತ್ತವೆ ಅಥವಾ ಅವಧಿಪೂರ್ವವಾಗಿ ಜನಿಸಿರುತ್ತವೆ. ಈ ನವಜಾತ ಶಿಶು ಘಟಕದಲ್ಲಿ ಇಂಥ ಶಿಶುಗಳನ್ನು ಉಳಿಸಬೇಕಾದರೆ ತಾಯಿಯ ಹಾಲು ನೀಡುವುದು ಅತ್ಯಗತ್ಯ. ಈ ಅಗತ್ಯತೆ ಮನಗಂಡು ಈ ಎಟಿಎಂ ಆರಂಭಿಸಲಾಗಿದೆ ಎಂದು ನಿರ್ದೇಶಕ ಎಸ್.ಸಿ.ಪರಿಜ್ಜಾ ಹೇಳಿದ್ದಾರೆ.

ಇಂಥ ಬ್ಯಾಂಕ್‌ಗಳನ್ನು ಎಲ್ಲ ನವಜಾತ ಶಿಶು ಆರೈಕೆ ಕೇಂದ್ರಗಳಲ್ಲೂ ತೆರೆಯುವುದು ಅಗತ್ಯ. ಏಕೆಂದರೆ ಅವಧಿಪೂರ್ವವಾಗಿ ಹುಟ್ಟುವ ಶಿಶುಗಳು ಆರು ತಿಂಗಳ ವರೆಗೂ ತಾಯಿಯ ಮೊಲೆಹಾಲು ಕುಡಿಯಲು ಅಸಮರ್ಥವಾಗಿರುತ್ತವೆ. ಇಂಥ ಶಿಶುಗಳ ರಕ್ಷಣೆ ದೃಷ್ಟಿಯಿಂದ ಇದು ಅಗತ್ಯ ಎಂದು ಅವರು ಹೇಳಿದ್ದಾರೆ. ಕೆಲ ಸಂದರ್ಭಗಳಲ್ಲಿ ತಾಯ ಹಾಲು ಇಲ್ಲದಿದ್ದರೆ ಅಥವಾ ಸಾಕಷ್ಟು ಪ್ರಮಾಣದಲ್ಲಿ ಇಲ್ಲದಿದ್ದರೆ, ದಾನಿ ತಾಯಂದಿರಿಂದ ಹಾಲು ಪಡೆದು ಇತರ ಮಕ್ಕಳಿಗೆ ವಿತರಿಸಲು ಈ ಬ್ಯಾಂಕ್ ಸ್ಥಾಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News