ಜಿಎಸ್‌ಟಿಗೆ ನಿತೀಶ್ ಬೆಂಬಲ ಕಾಂಗ್ರೆಸ್‌ಗೆ ಹೆಚ್ಚಿದ ಒತ್ತಡ

Update: 2016-07-20 15:01 GMT

ಹೊಸದಿಲ್ಲಿ, ಜು.20: ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಮಂಗಳವಾರ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ವಿಧೇಯಕದ ಬೆಂಬಲಕ್ಕೆ ಬಂದಿದ್ದಾರೆ. ಇದರಿಂದಾಗಿ ಅವರ ಮಿತ್ರ ಪಕ್ಷ ಕಾಂಗ್ರೆಸ್‌ಗೆ ಮಹತ್ವದ ಸುಧಾರಣಾ ಕ್ರಮಕ್ಕೆ ತನ್ನ ವಿರೋಧವನ್ನು ಮರು ವಿಮರ್ಷಿಸುವ ಅಥವಾ ಕನಿಷ್ಠ ತನ್ನ ನಿಲುವನ್ನು ಸ್ಪಷ್ಟಪಡಿಸುವ ಅನಿವಾರ್ಯ ಎದುರಾಗಿದೆ.
ಮಂಗಳವಾರ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ನಿತೀಶ್ ಭೇಟಿಯಾಗಿದ್ದ ವೇಳೆ ಜಿಎಸ್‌ಟಿ ಮಸೂದೆಯ ವಿಷಯ ಚರ್ಚೆಗೆ ಬಂದಿತ್ತು. ಉಭಯ ನಾಯಕರೂ ಈ ವಿಷಯದಲ್ಲಿ ಸಮಾನ ನೆಲೆಗೆ ತಲುಪಿರುವಂತೆ ಕಾಣಿಸಿತು. ಹಾಲಿ ಸಂಸತ್ ಅಧಿವೇಶನದಲ್ಲೇ ಮಸೂದೆಗೆ ಮಂಜೂರಾತಿ ಪಡೆಯುವ ಇಚ್ಛೆ ಸರಕಾರದ್ದಾಗಿದೆ.
ತಾವು ಜಿಎಸ್‌ಟಿಯನ್ನು ಸದಾ ಬೆಂಬಲಿಸಿದ್ದೇವೆ. ಯುಪಿಎ ಸರಕಾರದ ಕಾಲದಲ್ಲೂ ತಾವದನ್ನು ಬೆಂಬಲಿಸಿದ್ದೆವು ಹಾಗೂ ಈಗಲೂ ಬೆಂಬಲಿಸುತ್ತೇವೆ. ದೇಶ ಮತ್ತು ರಾಜ್ಯಗಳ ಹಿತಾಸಕ್ತಿಗಾಗಿ ತಮ್ಮ ಪಕ್ಷವು ಅದನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆಂದು ಸಭೆಯ ಬಳಿಕ ನಿತೀಶ್ ಪತ್ರಕರ್ತರಿಗೆ ತಿಳಿಸಿದರು.
ಎನ್‌ಡಿಎಗೆ ಸೇರದ, ಟಿಎಂಸಿ, ಬಿಜೆಡಿ ಹಾಗೂ ಎಸ್ಪಿ ಈಗಾಗಲೇ ಮಸೂದೆಗೆ ತಮ್ಮ ಬಹಿರಂಗ ಬೆಂಬಲವನ್ನು ಸಾರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News