ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಉನಾ: ಸದನದಲ್ಲಿ ಕೋಲಾಹಲ

Update: 2016-07-20 18:09 GMT

ಹೊಸದಿಲ್ಲಿ,ಜು.20: ಗುಜರಾತಿನಲ್ಲಿ ಗೋರಕ್ಷಕರಿಂದ ಕೆಲವು ದಲಿತ ಯುವಕರ ಮೇಲೆ ಬರ್ಬರ ಹಲ್ಲೆ ಕುರಿತಂತೆ ತೀವ್ರ ಕೋಲಾಹಲಕ್ಕೆ ಲೋಕಸಭೆಯು ಬುಧವಾರ ಸಾಕ್ಷಿಯಾಯಿತು. ಬಿಜೆಪಿ ಮತ್ತು ಆರೆಸ್ಸೆಸ್ ‘ದಲಿತ ಮುಕ್ತ ಭಾರತ’ಕ್ಕಾಗಿ ಶ್ರಮಿಸುತ್ತಿವೆ ಎಂಬ ಕಾಂಗ್ರೆಸ್ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸರಕಾರವು,ಕಾಂಗ್ರೆಸ್ ಆಡಳಿತದಲ್ಲಿ ದಲಿತರು ಎದುರಿಸಿದ ದೌರ್ಜನ್ಯಗಳ ಅಂಕಿಅಂಶಗಳನ್ನು ಉಲ್ಲೇಖಿಸಿತು.

ಪ್ರತಿಪಕ್ಷವು ವಿಷಯವನ್ನು ಪ್ರಸ್ತಾಪಿಸಿ ಗದ್ದಲವೆಬ್ಬಿಸಿದ ಬಳಿಕ ಗೃಹಸಚಿವ ರಾಜನಾಥ ಸಿಂಗ್ ಅವರು ಇದೊಂದು ಅತ್ಯಂತ ದುರದೃಷ್ಟಕರ ಘಟನೆ ಎಂದು ಬಣ್ಣಿಸಿದರು.
ಒಂಬತ್ತು ಆರೋಪಿಗಳನ್ನು ಬಂಧಿಸುವ ಮೂಲಕ ಆನಂದಿ ಬೆನ್ ಪಟೇಲ್ ಸರಕಾರವು ಚುರುಕಾದ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ ಹಾಗೂ ಅವರ ವಿಚಾರಣೆಗಾಗಿ ವಿಶೇಷ ನ್ಯಾಯಾಲಯವನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ ಎಂದರು. ಸಮಗ್ರ ಪ್ರತಿಪಕ್ಷ ಘಟನೆಗೆ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸದಸ್ಯರು ಸದನದ ಅಂಗಳದಲ್ಲಿ ನೆರೆದು ಗದ್ದಲವೆಬ್ಬಿಸಿದರು.
ವಿಪಕ್ಷ ಸದಸ್ಯರ ಗದ್ದಲದ ನಡುವೆಯೇ ಮಾತನಾಡಿದ ಗೃಹಸಚಿವರು, ದಲಿತರ ವಿರುದ್ಧ ಅಪರಾಧ ಸಾಮಾಜಿಕ ಪಿಡುಗು ಆಗಿದ್ದು, ಅದರ ನಿವಾರಣೆಗೆ ಎಲ್ಲ ಪಕ್ಷಗಳು ಕೈಜೋಡಿಸಬೇಕು ಎಂದರು.
ಸಚಿವರ ಉತ್ತರದಿಂದ ತೃಪ್ತರಾಗದ ಕಾಂಗ್ರೆಸ್ ಮತ್ತು ತೃಣಮೂಲ ಸದಸ್ಯರು ಸಭಾತ್ಯಾಗ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News