ಬಾಬರಿ ಮಸೀದಿ ಪ್ರಕರಣದ ಅತ್ಯಂತ ಹಳೆಯ ಕಕ್ಷಿದಾರ ಹಾಶಿಂ ಅನ್ಸಾರಿ ನಿಧನ

Update: 2016-07-20 18:15 GMT

ಅಯೋಧ್ಯೆ,ಜು.20: ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ ಪ್ರಕರಣದಲ್ಲಿ ಅತ್ಯಂತ ಹಳೆಯ ಕಕ್ಷಿದಾರರಾಗಿದ್ದ ಹಾಶಿಂ ಅನ್ಸಾರಿ(95) ಅವರು ಬುಧವಾರ ನಸುಕಿನಲ್ಲಿ ಇಲ್ಲಿಯ ತನ್ನ ನಿವಾಸದಲ್ಲಿ ನಿಧನರಾದರು. ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಅವರು 1949ರಿಂದಲೂ ಪ್ರಕರಣದೊಂದಿಗೆ ಗುರುತಿಸಿಕೊಂಡಿದ್ದರು.

ಅಯೋಧ್ಯೆ ಸಂಜಾತ ಅನ್ಸಾರಿ 1949ರಲ್ಲಿ ಫೈಝಾಬಾದ್‌ನ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ ಮೊದಲಿಗರಾಗಿದ್ದರು. ಸುನ್ನಿ ಕೇಂದ್ರ ವಕ್ಫ್ ಮಂಡಳಿಯು ದಾಖಲಿಸಿದ್ದ ಅಯೋಧ್ಯೆ ಮೊಕದ್ದಮೆಯಲ್ಲಿ ಅನ್ಸಾರಿ ಇತರ ಆರು ಜನರೊಂದಿಗೆ ಮುಖ್ಯ ವಾದಿಯಾಗಿದ್ದರು.
2010ರಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯವು ತನ್ನ ಬಹುಮತದ ತೀರ್ಪಿನಲ್ಲಿ ಅಯೋಧ್ಯೆಯ ವಿವಾದಿತ ನಿವೇಶನದ ಮೂರನೇ ಒಂದು ಭಾಗವನ್ನು ನಿರ್ಮೋಹಿ ಅಖಾಡಾಗೆ ನೀಡಿತ್ತು ಮತ್ತು ಉಳಿದ ಮೂರನೇ ಎರಡು ಭಾಗವನ್ನು ವಕ್ಫ್ ಮಂಡಳಿ ಮತ್ತು ರಾಮ ಲಲ್ಲಾನ ಪ್ರತಿನಿಧಿಗಳು ಸಮಾನವಾಗಿ ಹಂಚಿಕೊಳ್ಳಬೇಕೆಂದು ಆದೇಶಿಸಿತ್ತು.
ತೀರ್ಪು ಹೊರಬಿದ್ದ ಬೆನ್ನಿಗೇ ಅನ್ಸಾರಿ ಅವರು ವಿವಾದಕ್ಕೆ ಅಂತ್ಯ ಹಾಡಲು ಮತ್ತು ‘ಹೊಸ ಆರಂಭ’ ವೊಂದಕ್ಕೆ ಕರೆ ನೀಡಿದ್ದರು.
ಅಯೋಧ್ಯೆ ವಿವಾದಕ್ಕೆ ನ್ಯಾಯಾಲಯದ ಹೊರಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿ ಅನ್ಸಾರಿ ಕಳೆದ ವರ್ಷದ ಫೆಬ್ರವರಿಯಲ್ಲಿ,ಈ ವಿಷಯದಲ್ಲಿ ಶಾಂತಿಪೂರ್ಣ ಪರಿಹಾರಕ್ಕಾಗಿ ತಾನು ಅಲ್ಪಸಂಖ್ಯಾತ ಸಮುದಾಯದ ಗಣ್ಯರೊಂದಿಗೆ ತೊಡಗಿಸಿಕೊಳ್ಳುವುದಾಗಿ ಹೇಳಿದ್ದರು.
ವಿವಾದ ಪರಿಹಾರಕ್ಕೆ ಹೊಸ ಪ್ರಸ್ತಾವನೆಯ ಬಗ್ಗೆ ಚರ್ಚಿಸಲು ಅವರು ಅಖಾಡಾ ಪರಿಷದ್‌ನ ಅಧ್ಯಕ್ಷ ಮಹಂತ ಜ್ಞಾನ ಸಿಂಗ್ ಅವರನ್ನೂ ಭೇಟಿಯಾಗಿದ್ದರು.
ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪಿನ ಬಳಿಕ 2010, ಸೆ.30ರಂದು ಆರಂಭಗೊಂಡ ಸಂಧಾನ ಪ್ರಕ್ರಿಯೆಯನ್ನು ನಾಗರಿಕ ಸಮಾಜದ ಎಲ್ಲ ವರ್ಗಗಳು ಮತ್ತು ಉಭಯ ಸಮುದಾಯಗಳ ಧಾರ್ಮಿಕ ನಾಯಕರು ಬೆಂಬಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News