"ಹಿಂದುತ್ವದ ಹೆಸರಿನಲ್ಲಿ ದೌರ್ಜನ್ಯ ನಿಲ್ಲದಿದ್ದರೆ ಹಿಂದೂ ಧರ್ಮವನ್ನೇ ಬಿಡುತ್ತೇವೆ"

Update: 2016-07-21 05:42 GMT

ಅಹ್ಮದಾಬಾದ್,ಜು.21:  ದಲಿತರ  ಪ್ರತಿಭಟನೆಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಂತಿ ಕಾಪಾಡಲು ಮುಖ್ಯಮಂತ್ರಿ ಆನಂದಿ ಬೆನ್ ಕರೆ ನೀಡಿರುವಂತೆಯೇ ಹಿಂದುತ್ವದ ಹೆಸರಿನಲ್ಲಿ ದೌರ್ಜನ್ಯ ನಿಲ್ಲದಿದ್ದರೆ ಹಿಂದೂ ಧರ್ಮವನ್ನೇ ಬಿಡುತ್ತೇವೆ, ಎಂದು ಗುಜರಾತ್ ದಲಿತರು ಬೆದರಿಕೆ ಹಾಕಿದ್ದಾರೆ.

ತರುವಾಯ ದಲಿತ ಹೋರಾಟಗಾರರ  ಸತ್ಯ ಶೋಧನಾ ತಂಡ ಸತ್ತ ಗೋವೊಂದರ ಚರ್ಮ ಸುಲಿದು ಸಾಗಣೆ ಮಾಡುತ್ತಿದ್ದರೆನ್ನಲಾದ ದಲಿತ ಕುಟುಂಬವೊಂದರ ಏಳು ಮಂದಿ ಸದಸ್ಯರ ಮೇಲೆ ಗಿರ್ ಸೋಮನಾಥ್ ಜಿಲ್ಲೆಯ  ಉನಾದಲ್ಲಿ ನಡೆದ  ದೌರ್ಜನ್ಯ ಪ್ರಕರಣದ ಸಂಬಂಧ ವರದಿ ಬಿಡುಗಡೆ ಮಾಡಿದೆ.

ಎಂಟು ಮಂದಿಯ ತಂಡದ ಸತ್ಯ ಶೋಧನಾ ವರದಿಯಂತೆ ಆರೋಪಿಗಳು ದಲಿತ ಕುಟುಂಬದ ಮೇಲೆ ಹಿಂದುತ್ವದ ಹೆಸರಿನಲ್ಲಿ ಹಲ್ಲೆ ನಡೆಸಿದ್ದು ಅವರಿಗೆ ಆರೆಸ್ಸೆಸ್, ಬಿಜೆಪಿ ಹಾಗೂ ವಿಹಿಂಪ ಬೆಂಬಲವಿತ್ತೆಂದು ಹೇಳಿದೆ.

ಸೌರಾಷ್ಟ್ರ ಮತ್ತಿತರ ಜಿಲ್ಲೆಗಳಲ್ಲಿ ಪ್ರತಿಭಟನೆಗಳ ಕಾವು ಹೆಚ್ಚುತ್ತಿದ್ದಂತೆಯೇ ಈ ವರದಿ ಬಿಡುಗಡೆಯಾಗಿದೆ.  ಈತನ್ಮಧ್ಯೆ ರಾಜ್ಯದಲ್ಲಿ ಏಳು ದಲಿತರು ಆತ್ಮಹತ್ಯೆಗೆ ಯತ್ನಿಸಿದ್ದರೆ, ಅವರಲ್ಲಿ ಒಬ್ಬ ಮೃತ ಪಟ್ಟಿದ್ದಾನೆ. ಗಲಭೆಕೋರರ ಕಲ್ಲು ತೂರಾಟದಿಂದ ಗಾಯಗೊಂಡಿದ್ದ ಪೊಲೀಸ್ ಸಿಬ್ಬಂದಿಯೊಬ್ಬರೂ ಸಾವಿಗೀಡಾಗಿದ್ದಾರೆ. ಘಟನೆಯ ಸಂಬಂಧ ಪೊಲೀಸರು ಇನ್ನೂ ಏಳು ಜನರನ್ನು ಬಂಧಿಸಿದ್ದು ಒಟ್ಟು ಬಂಧನಗಳ ಸಂಖ್ಯೆ 16 ಕ್ಕೆ ಏರಿದೆ.

ಆರೋಪಿಗಳು ಉನಾ ಪೊಲೀಸ್ ಠಾಣೆಯ ಎದುರೇ  ದಲಿತ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆಂದು ಸತ್ಯ ಶೋಧನಾ ತಂಡದಲ್ಲಿದ್ದ ದಲಿತ ಹಕ್ಕು ಕಾರ್ಯಕರ್ತ ಕೌಶಿಕ್ ಪರ್ಮಾರ್  ಆಪಾದಿಸಿದ್ದಾರೆ.

ಅರೋಪಿಗಳು ತಮ್ಮ ಭಾವಚಿತ್ರ ತೆಗೆದು, ನಂತರ ದೌರ್ಜನ್ಯದ ವೀಡಿಯೋ ಚಿತ್ರೀಕರಣ ನಡೆಸಿ  ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆಂದಾದರೆ ಅವರಿಗೆ  ಪೊಲೀಸರು, ಆರೆಸ್ಸೆಸ್, ಬಿಜೆಪಿ ಹಾಗೂ ವಿಹಿಂಪದ ಬೆಂಬಲವಿದ್ದು  ತಮಗೇನೂ ತೊಂದರೆಯಾಗಲು ಸಾಧ್ಯವಿಲ್ಲವೆಂಬ ನಂಬಿಕೆ ಅವರಲ್ಲಿತ್ತು ಎಂದು ಪರ್ಮಾರ್ ಹೇಳಿದ್ದಾರೆ.

ರಾಜ್ಯದಾದ್ಯಂತ ಗೋ ರಕ್ಷಕ್ ಸಮಿತಿಗಳನ್ನು ನಿಷೇಧಿಸಬೇಕೆಂದು ಅವರು ಆಗ್ರಹಿಸಿದರು. ರಾಜ್ಯದ ಪೊಲೀಸರು ಆರೋಪಿಗಳೊಂದಿಗೆ ಶಾಮೀಲಾಗಿದ್ದಾರೆಂದು ಆರೋಪಿಸಿದ ಅವರು ಹಲ್ಲೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಹೇಳಿದ್ದಾರೆ. ಸಂತ್ರಸ್ತರಿಗೆ 10 ಲಕ್ಷ ರೂ.  ಪರಿಹಾರ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
 
ಸತ್ಯ ಶೋಧನಾ ತಂಡ ಸಂತ್ರಸ್ತರನ್ನು ಹಾಗೂ ಘಟನೆ ನಡೆದ ಗ್ರಾಮವನ್ನು ಸಂದರ್ಶಿಸಿದೆ. ವರದಿಯ ಪ್ರಕಾರ ಹತ್ತಿರ ಗ್ರಾಮಗಳಲ್ಲಿ ಸಿಂಹಗಳು ಎರಡು ದನಗಳನ್ನು ಕೊಂದಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News