‘‘ದಲಿತರ ಮೇಲಿನ ಹಲ್ಲೆಗೆ ಪರೋಕ್ಷ ಸಹಕಾರ ನೀಡಿದ ಗುಜರಾತ್ ಪೊಲೀಸರು’’

Update: 2016-07-21 12:15 GMT

ಅಹ್ಮದಾಬಾದ್,ಜು.21 : ಸತ್ತ ಗೋವುಗಳ ಚರ್ಮ ಸುಲಿದಿದ್ದಾರೆಂಬ ಆರೋಪ ಹೊರಿಸಿ ನಾಲ್ಕು ಮಂದಿ ದಲಿತರ ಮೇಲೆ ಸ್ವಘೋಷಿತ ನೈತಿಕ ಪೊಲೀಸರಿಂದ ನಡೆದ ಅಮಾನುಷ ಹಲ್ಲೆಯನ್ನು ಪೊಲೀಸರು ತಡೆಯಬಹುದಾಗಿತ್ತು ಹಾಗೂ ಹಲ್ಲೆಗೆ ಪೊಲೀಸರೇ ಪರೋಕ್ಷ ಸಹಕಾರ ನೀಡಿದ್ದರು, ಎಂದು ಘಟನೆಯ ಬಗೆಗೆ ಎಂಟು ಮಂದಿ ಸ್ವತಂತ್ರ ದಲಿತ ಹಕ್ಕುಗಳ ಕಾರ್ಯಕರ್ತರು ಸಿದ್ಧಪಡಿಸಿರುವ ಸತ್ಯ ಶೋಧನಾ ವರದಿಯಲ್ಲಿ ಹೇಳಲಾಗಿದೆ.

ಸ್ವಘೋಷಿತ ಗೋ ರಕ್ಷಕರು ಸಂತ್ರಸ್ತರನ್ನು ಕಾರೊಂದರಲ್ಲಿ ಕುಳ್ಳಿರಿಸಿ ಹೋಗುತ್ತಿದ್ದಾಗ ಅವರನ್ನು ಪೊಲೀಸ್ ವಾಹನವೊಂದು ತಡೆದರೂ, ಪೊಲೀಸರು ದುಷ್ಕರ್ಮಿಗಳೊಂದಿಗೆ ಮಾತನಾಡಿ ಮುಂದೆ ಸಾಗಲು ಅನುಮತಿಸಿದ್ದರು, ಎಂದು ಮೂರು ಪುಟಗಳ ಸತ್ಯ ಶೋಧನಾ ವರದಿ ತಿಳಿಸಿದೆ.

ಉನಾ ಪೊಲೀಸರು ಘಟನೆಯ ಬಗ್ಗೆ ಎಫ್ ಐ ಆರ್ ದಾಖಲಿಸಲು ಆರು ಗಂಟೆಗಳನ್ನೇಕೆ ತೆಗೆದುಕೊಂಡರು ಹಾಗೂ ಸಂತ್ರಸ್ತರ ಹೆತ್ತವರು ಅವರನ್ನು ನೋಡಲು ಜುಲೈ 11 ರ ರಾತ್ರಿಹೋಗದಂತೆ ಪೊಲೀಸರು ಏಕೆ ತಡೆದರು, ಎಂದು ವರದಿ ಪ್ರಶ್ನಿಸಿದೆ.

ಮೆಹಸಾನಾದ ಕಾನೂನು ವಿದ್ಯಾರ್ಥಿ ಸುಬೋಧ್ ಪರ್ಮಾರ್, ದಲಿತ ಕಾರ್ಯಕರ್ತರಾದ ಕಿರಿತ್ ರಾಥೋಡ್, ಕಾಂತಿಭಾಯಿ ಪರ್ಮಾರ್ ಹಾಗೂ ಕೌಶಿಕ್ ಪರ್ಮಾರ್ ಸತ್ಯ ಶೋಧನಾ ತಂಡದಲ್ಲಿದ್ದರು.

ವರದಿಯಲ್ಲಿ ತಿಳಿಸಿದಂತೆ ಯುವಕರ ಮೇಲೆ ಹಲ್ಲೆ ಮೊದಲು ಮೋಟಾ ಸಮಾಧಿಯಾಲದಲ್ಲಿ ಜುಲೈ 11 ರ ಬೆಳಗ್ಗೆ ಆರಂಭವಾಗಿತ್ತು. ಬಾಲು ಭಾಯಿಯ ಪುತ್ರರಾದ ರಮೇಶ್ ಹಾಗೂ ವೇಶ್ರಮ್ ಹಾಗೂ ಆತನ ಸೋದರಳಿಯರಾದಬೆಚಾರ್ ಹಾಗೂ ಅಶೋಕ್ ಗ್ರಾಮದಲ್ಲಿ ಸತ್ತ ದನಗಳ ಚರ್ಮ ಸುಲಿಯುತ್ತಿದ್ದಾಗ ಆ ದಾರಿಯಾಗಿ ಹಾದು ಹೋದ ಕಾರೊಂದು ಕೆಲ ನಿಮಿಷಗಳ ನಂತರ ಮತ್ತೆರಡು ಕಾರುಗಳೊಂದಿಗೆ ಹಿಂದಿರುಗಿದ್ದವು, ಅದರಲ್ಲಿ ದೊಣ್ಣೆ ಹಾಗೂ ಕಬ್ಬಿಣದ ಪೈಪುಗಳನ್ನು ಹಿಡಿದುಕೊಂಡಿದ್ದ 35 ಮಂದಿಯಿದ್ದರು ಎಂದು ವರದಿ ಹೇಳಿದೆ. ಯುವಕರು ತಾವು ಅದಾಗಲೇ ಸತ್ತಿರುವ ದನಗಳ ಚರ್ಮ ಸುಲಿಯುತ್ತಿರುವುದಾಗಿ ಹೇಳಿಕೊಂಡರೂ ಕೇಳದೆ ಅವರ ಮೇಲೆ ಸ್ವಘೋಷಿತ ಗೋರಕ್ಷಕರು ಹಲ್ಲೆ ನಡೆಸಿದರೆಂದು ವರದಿ ತಿಳಿಸಿದೆ.

ಆರೋಪಿಗಳು ಘಟನೆಯ ವೀಡಿಯೊ ಚಿತ್ರೀಕರಣ ನಡೆಸಿ ನಂತರ ಸಂತ್ರಸ್ತರನ್ನು ಉನಾ ಪೊಲೀಸ್ ಠಾಣೆಯಲ್ಲಿ ಬಿಟ್ಟರೂಪೊಲೀಸರು ದಾಳಿಕೋರರನ್ನು ಬಂಧಿಸದೆ ಸಂತ್ರಸ್ತರನ್ನು ಠಾಣೆಯಲ್ಲಿ ಮುಂದಿನ ಕೆಲ ಗಂಟೆಗಳ ಕಾಲ ಉಳಿಸಿದ್ದರು, ಎಂದು ವರದಿ ಹೇಳಿದೆ.

ಮೇಲಾಗಿ ದಾಳಿಕೋರರು ಹಲವು ಮಂದಿಯಿದ್ದರೂ ಪೊಲೀಸರು ಕೇವಲ ಆರು ಮಂದಿಯನ್ನು ಎಫ್ ಐ ಆರ್ ನಲ್ಲಿ ಉಲ್ಲೇಖಿಸಿದ್ದಾರೆಂದೂ ವರದಿ ತಿಳಿಸಿದೆ.

ಘಟನೆಯ ನಂತರ ಮೋಟಾ ಸಮಾಧಿಯಾಲ ಗ್ರಾಮಸ್ಥರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಅಂಬ್ಯುಲೆನ್ಸ್ ಒಂದನ್ನು ಬರ ಹೇಳಿದ್ದರೂ ಪೊಲೀಸರುಅವರನ್ನು ಉನಾ ಪಟ್ಟಣಕ್ಕೆ ಕರೆದುಕೊಂಡು ಹೋಗುವ ಬದಲು ಗಿರಿ ಗಡ್ಡಾಗೆ ಹೋಗುವಂತೆ ತಾಕೀತು ಮಾಡಿದ್ದರೆಂದು ವರದಿಯಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News