ಕುಟುಂಬ ಸದಸ್ಯರಿಗೆ ಕೆಲಸ ದೊರಕಿಸಲು ಹುದ್ದೆ ದುರುಪಯೋಗಿಸದಿರಿ : ಕೇಂದ್ರ ನೌಕರರಿಗೆ ಸರಕಾರದ ಸೂಚನೆ

Update: 2016-07-21 12:49 GMT

ಹೊಸದಿಲ್ಲಿ, ಜು.21: ಯಾವುದೇ ಕಂಪೆನಿ ಅಥವಾ ಸಂಸ್ಥೆಯಲ್ಲಿ ಕುಟುಂಬ ಸದಸ್ಯರು ಅಥವಾ ರಕ್ತ ಸಂಬಂಧಿಗಳಿಗೆ ಕೆಲಸ ದೊರಕಿಸಿಕೊಡಲು ತಮ್ಮ ಹುದ್ದೆಯ ದುರ್ಬಳಕೆ ಮಾಡದಂತೆ ಎಲ್ಲ ಕೇಂದ್ರ ಸರಕಾರಿ ನೌಕರರಿಗೆ ಸರಕಾರವು ಬುಧವಾರ ಸೂಚನೆ ನೀಡಿದೆ. ಕಂಪೆನಿಯೊಂದರಲ್ಲಿ ಕುಟುಂಬದ ಸದಸ್ಯನೊಬ್ಬ ನೌಕರನಾಗಿದ್ದರೆ, ಆ ಕುಟುಂಬದ ಸರಕಾರಿ ನೌಕರ ಆ ಕಂಪೆನಿಗೆ ಅಥವಾ ಅದರಲ್ಲಿರುವ ಯಾವನೇ ವ್ಯಕ್ತಿಗೆ ಯಾವುದೇ ಗುತ್ತಿಗೆ ನೀಡುವುದನ್ನು ಈಗಿರುವ ನಿಯಮಗಳು ನಿಷೇಧಿಸುತ್ತವೆ. ಅಂತಹ ಪ್ರತಿ ವಿಷಯ ಅಥವಾ ಗುತ್ತಿಗೆಯ ಬಗ್ಗೆ ಸರಕಾರಿ ನೌಕರನು ತನ್ನ ಮೇಲಧಿಕಾರಿಗಳಿಗೆ ತಿಳಿಸಬೇಕಾಗುತ್ತದೆ.

ಸರಕಾರಿ ನೌಕರಿಯಲ್ಲಿರುವವರ ಗಂಡ, ಹೆಂಡತಿ, ಮಗ, ಮಗಳು, ಹೆತ್ತವರು, ಸೋದರ, ಸೋದರಿ ಅಥವಾ ಅವರಲ್ಲಿ ಯಾರಿಗಾದರೂ ವಿವಾಹ ಸಂಬಂಧದಿಂದ ಬಂಧುಗಳಾದವರು(ಅವರು ಸರಕಾರಿ ನೌಕರನ ಆಶ್ರಿತರಾಗಿರಲಿ ಅಥವಾ ಅಲ್ಲದಿರಲಿ) ಅವರಲ್ಲಿ ಸೇರುತ್ತಾರೆಂದು ಸಂಶಯ ನಿವಾರಣೆಗಾಗಿ ಸ್ಪಷ್ಟಪಡಿಸಲಾಗಿದೆ.
ಸಿಬ್ಬಂದಿ ಹಾಗೂ ತರಬೇತಿ ಇಲಾಖೆ ಎಲ್ಲ ಸಚಿವಾಲಯಗಳಿಗೆ ನೀಡಿದ ನಿರ್ದೇಶನವೊಂದರಲ್ಲಿ ಇದನ್ನು ತಿಳಿಸಿದೆ.
ಉದ್ಯೋಗಿಗಳು ತಮ್ಮ ನಡವಳಿಕೆ ನಿಯಮಗಳನ್ನು ಉಲ್ಲಂಘಿಸಿರುವ ಕೆಲವು ಉದಾಹರಣೆಗಳು ಸರಕಾರದ ಗಮನಕ್ಕೆ ಬಂದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ಇಂತಹ ಉದಾಹರಣೆಗಳ ಕುರಿತು ತನಿಖೆಯ ವೇಳೆ ಆರೋಪಿಗಳು, ಯಾರನ್ನೆಲ್ಲ ಬಂಧುಗಳೆಂದು ಪರಿಗಣಿಸಬೇಕೆಂಬುದು ತಮಗೆ ಗೊತ್ತಿರಲಿಲ್ಲವೆಂದ ಕಾರಣಕ್ಕಾಗಿ ಆ ಬಗ್ಗೆ ಸ್ಪಷ್ಟೀಕರಿಸಲಾಗಿದೆಯೆಂದು ಇಲಾಖೆಯ ಹಿರಿಯಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News