2001ರಿಂದೀಚೆ ಅಸ್ಸಾಂನಲ್ಲಿ 239 ಖಡ್ಗಮೃಗಗಳ ಹತ್ಯೆ

Update: 2016-07-22 13:15 GMT

ಗುವಾಹತಿ, ಜು.22: ಭಾರೀ ಭದ್ರತೆಯ ಹೊರತಾಗಿಯೂ, ಅಸ್ಸಾಂನಲ್ಲಿ 2001ರಿಂದ 2016ರ ವರೆಗೆ ಒಟ್ಟು 239 ಒಂಟಿ ಕೊಂಬಿನ ಖಡ್ಗಮೃಗಗಳನ್ನು ಕಳ್ಳಬೇಟೆಗಾರರು ಕೊಂದಿದ್ದಾರೆ. ಅವುಗಳಲ್ಲಿ ಗರಿಷ್ಠ 161 ಖಡ್ಗಮೃಗಗಳನ್ನು ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲೇ ಹತ್ಯೆ ಮಾಡಲಾಗಿದೆಯೆಂದು ಅಸ್ಸಾಂ ವಿಧಾನಸಭೆಗೆ ಶುಕ್ರವಾರ ಮಾಹಿತಿ ನೀಡಲಾಗಿದೆ.
ಕಾಂಗ್ರೆಸ್‌ನ ಅಜಂತಾ ನಿಯೋಗ್‌ರ ಪ್ರಶ್ನೆಗೆ ಉತ್ತರಿಸುತ್ತಿದ್ದ ಅರಣ್ಯ ಸಚಿವೆ ಪ್ರಮೀಳಾ ರಾಣಿ ಬ್ರಹ್ಮ, 2001ರಿಂದೀಚೆಗೆ ಅರಣ್ಯ ಇಲಾಖೆಯು 661 ಮಂದಿ ಕಳ್ಳಬೇಟೆಗಾರರನ್ನು ಬಂಧಿಸಿದೆಯೆಂದು ತಿಳಿಸಿದರು.
ಕಾಜಿರಂಗದಲ್ಲಿ 161, ಒರಾಂಗ್ ರಾಷ್ಟ್ರೀಯ ಉದ್ಯಾನದಲ್ಲಿ 34, ಪಬಿತೋರಾ ವನ್ಯಮೃಗದಾಮದಲ್ಲಿ 15 ಹಾಗೂ ಮಾನಸ್ ರಾಷ್ಟ್ರೀಯ ಉದ್ಯಾನದಲ್ಲಿ 9 ಒಂಟಿಕೊಂಬಿನ ಖಡ್ಗಮೃಗಗಳನ್ನು ಕಳ್ಳ ಬೇಟೆಗಾರರು ಕೊಂದಿದ್ದಾರೆ. ಉಳಿದ 20 ಖಡ್ಗಮೃಗಗಳ ಹತ್ಯೆ ರಾಜ್ಯದ ನಾನಾ ಪ್ರದೇಶಗಳಲ್ಲಿ ನಡೆದಿದೆಯೆಂದು ಅವರು ಮಾಹಿತಿ ನೀಡಿದರು.
ಈ ವರ್ಷದ ಜನವರಿಯಿಂದೀಚೆಗೆ ಕಾಜಿರಂಗದಲ್ಲಿ 12, ಮಾನಸ್, ಒರಾಂಗ್ ಹಾಗೂ ಸೋನಿತ್‌ಪುರ ರಾಷ್ಟ್ರೀಯ ಉದ್ಯಾನಗಳಲ್ಲಿ ತಲಾ ಒಂದು ಹೀಗೆ ಒಟ್ಟು 15 ಒಂಟಿ ಕೊಂಬಿನ ಖಡ್ಗಮೃಗಗಳು ಕಳ್ಳ ಬೇಟೆಗಾರರಿಗೆ ಬಲಿಯಾಗಿವೆಯೆಂದು ಪ್ರಮೀಳಾ ತಿಳಿಸಿದರು.
ಕಳೆದ 5 ವರ್ಷಗಳಲ್ಲಿ ಅಸ್ಸಾಂನ ವಿವಿಧ ಭಾಗಗಳಲ್ಲಿ ಮಾನವ-ಪ್ರಾಣಿ ಸಂಘರ್ಷಗಳಲ್ಲಿ 386 ಜನರು ಹಾಗೂ 43 ಪ್ರಾಣಿಗಳು ಕೊಲ್ಲಲ್ಪಟ್ಟಿವೆಯೆಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News