ಒಂದು ವಾರದಲ್ಲಿ ಆದರ್ಶ ಸೊಸೈಟಿಯನ್ನು ವಶಕ್ಕೆ ಪಡೆಯುವಂತೆ ಕೇಂದ್ರಕ್ಕೆ ಸುಪ್ರೀಂ ನಿರ್ದೇಶ

Update: 2016-07-22 18:44 GMT

ಹೊಸದಿಲ್ಲಿ,ಜು.22: ಮುಂಬೈನ ಕಫ್ ಪರೇಡ್ ಪ್ರದೇಶದಲ್ಲಿರುವ ವಿವಾದಾತ್ಮಕ ಆದರ್ಶ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಕಟ್ಟಡವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಕೇಂದ್ರ ಸರಕಾರಕ್ಕೆ ನಿರ್ದೇಶ ನೀಡಿದೆ. ಇದೇ ವೇಳೆ,ಕಟ್ಟಡವನ್ನು ನೆಲಸಮಗೊಳಿಸುವಂತೆ ಬಾಂಬೆ ಉಚ್ಚ ನ್ಯಾಯಾಲಯವು ನೀಡಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳು ಇತ್ಯರ್ಥಗೊಳ್ಳುವವರೆಗೆ ಅದರ ಸುರಕ್ಷತೆಯನ್ನು ಕಾಯ್ದುಕೊಳ್ಳುವಂತೆಯೂ ನ್ಯಾಯಾಲಯವು ಕೇಂದ್ರಕ್ಕೆ ಸೂಚಿಸಿದೆ.

ಯಾವುದೇ ಅತಿಕ್ರಮಣವಾಗದಂತೆ ಮತ್ತು ಅನಧಿಕೃತ ವ್ಯಕ್ತಿಗಳು ಕಟ್ಟಡದ ಆವರಣವನ್ನು ಪ್ರವೇಶಿಸದಂತೆ ನೋಡಿಕೊಳ್ಳಬೇಕೆಂದೂ ನ್ಯಾ.ಜೆ.ಚೆಲಮೇಶ್ವರ ಅವರ ನೇತೃತ್ವದ ಪೀಠವು ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರಿಗೆ ತಾಕೀತು ಮಾಡಿತು.

ಕಟ್ಟಡವನ್ನು ನೆಲಸಮಗೊಳಿಸುವುದರ ವಿರುದ್ಧ ವಿದ್ಯುಕ್ತ ತಡೆಯಾಜ್ಞೆ ಇಲ್ಲದಿದ್ದರೂ, ಕುಮಾರ್ ಅವರು ಕಟ್ಟಡವನ್ನು ನೆಲಸಮಗೊಳಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು. ಕಟ್ಟಡವನ್ನು ನೆಲಸಮಗೊಳಿಸುವಂತೆ ಬಾಂಬೆ ಉಚ್ಚ ನ್ಯಾಯಾಲಯವು ಎ.30ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News