ವಿಶ್ವಸಂಸ್ಥೆಯ ವಿಶ್ವಸ್ತ ನಿಧಿಗೆ ದೇಣಿಗೆ ನೀಡಿದ ಮೊದಲ ರಾಷ್ಟ್ರ ಭಾರತ

Update: 2016-07-23 13:04 GMT

ವಿಶ್ವಸಂಸ್ಥೆ,ಜು.23: ಶಾಂತಿಪಾಲನಾ ಪಡೆಯ ಯೋಧರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತರಿಗೆ ಪರಿಹಾರವನ್ನೊದಗಿಸಲು ರೂಪಿಸಲಾಗಿರುವ ವಿಶ್ವಸಂಸ್ಥೆಯ ವಿಶ್ವಸ್ತ ನಿಧಿಗೆ ಭಾರತವು ಒಂದು ಲಕ್ಷ ಡಾಲರ್ ದೇಣಿಗೆಯನ್ನು ನೀಡಿದೆ. ತನ್ಮೂಲಕ ಈ ನಿಧಿಗೆ ದೇಣಿಗೆ ನೀಡಿದ ಮೊದಲ ರಾಷ್ಟ್ರವೆನಿಸಿಕೊಂಡಿದೆ.
ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಬಾನ್ ಕಿ-ಮೂನ್ ಅವರ ಉಪವಕ್ತಾರ ಫರ್ಹಾನ್ ಹಕ್ ಅವರು ಶುಕ್ರವಾರ ಸುದ್ದಿಗಾರರಿಗೆ ಈ ವಿಷಯವನ್ನು ತಿಳಿಸಿದರು.
ಭಾರತವು ಮೊದಲಿನಿಂದಲೂ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ಕಳುಹಿಸುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಪ್ರಸ್ತುತ ಅದು ವಿಶ್ವಸಂಸ್ಥೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಿಲಿಟರಿ ಮತ್ತು ಪೊಲೀಸ್ ಸಿಬ್ಬಂದಿಗಳನ್ನು ಒದಗಿಸಿರುವ ಎರಡನೆಯ ರಾಷ್ಟ್ರವಾಗಿದೆ.

ಈ ದೇಣಿಗೆಯೊಂದಿಗೆ ಭಾರತ ಸರಕಾರವು ವಿಶ್ವಸಂಸ್ಥೆಯ ನಾಗರಿಕ ಮತ್ತು ಮಿಲಿಟರಿ ಸಿಬ್ಬಂದಿಗಳಿಂದ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿರುವವರ ನೆರವಿಗೆ ಧಾವಿಸುವ ನಮ್ಮ ಸಂತ್ರಸ್ತ ಕೇಂದ್ರಿತ ಅಭಿಯಾನಕ್ಕೆ ತನ್ನ ಕಟ್ಟಾ ಬದ್ಧತೆಯನ್ನು ಪ್ರದರ್ಶಿಸಿದೆ. ಈ ದೇಣಿಗೆಗಾಗಿ ನಾವು ಭಾರತಕ್ಕೆ ತುಂಬ ಆಭಾರಿಯಾಗಿದ್ದೇವೆ ಎಂದು ವಿಶ್ವಸಂಸ್ಥೆಯ ಕ್ಷೇತ್ರ ಬೆಂಬಲ ವಿಭಾಗ(ಡಿಎಫ್‌ಎಸ್)ದ ಅಧೀನ ಕಾರ್ಯದರ್ಶಿ ಅತುಲ್ ಖರೆ ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಈ ವಿಶ್ವಸ್ತ ನಿಧಿಯನ್ನು ಸ್ಥಾಪಿಸಿರುವ ವಿಶ್ವಸಂಸ್ಥೆಯ ಸಚಿವಾಲಯವು ಉದಾರ ದೇಣಿಗೆಗಳನ್ನು ನೀಡುವಂತೆ ಸದಸ್ಯ ರಾಷ್ಟ್ರಗಳನ್ನು ಕೋರಿದೆ.
ತನ್ನ ಶಾಂತಿಪಾಲಕರಿಂದ,ನಿರ್ದಿಷ್ಟವಾಗಿ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್‌ನಲ್ಲಿ ಕರ್ತವ್ಯ ನಿರತ ಸಿಬ್ಬಂದಿಗಳಿಂದ ಸ್ಥಳೀಯ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳಿಂದಾಗಿ ವಿಶ್ವಸಂಸ್ಥೆಯು ಭಾರಿ ಟೀಕೆಗಳಿಗೆ ಗುರಿಯಾಗಿತ್ತು.
2016ರಲ್ಲಿ ಈವರೆಗೆ ಇಂತಹ ಲೈಂಗಿಕ ದೌರ್ಜನ್ಯದ 44 ದೂರುಗಳನ್ನು ವಿಸ್ವಸಂಸ್ಥೆಯು ಸ್ವೀಕರಿಸಿದೆ. 2015ರಲ್ಲಿ ಇಂತಹ 69 ದೂರುಗಳು ದಾಖಲಾಗಿದ್ದವು. ಹೆಮ್ಮೆಯ ವಿಷಯವೆಂದರೆ ಶಾಂತಿಪಾಲನಾ ಪಡೆಗೆ ನಿಯೋಜಿತ ಭಾರತೀಯ ಯೋಧರಾರೂ ಈವರೆಗೆ ಇಂತಹ ಆರೋಪಕ್ಕೊಳಗಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News