ಎಚ್ಚರಿಕೆ, ಬಾಟಲಿ ನೀರು ಕುಡಿಯಲು ಯೋಗ್ಯವಲ್ಲ!

Update: 2016-07-24 06:37 GMT

ತಿರುವನಂತಪುರ, ಜು.24: ನೀವು ಬಾಟಲಿ ನೀರು ಕುಡಿಯುತ್ತಿದ್ದಲ್ಲಿ ಇದನ್ನು ಓದಲೇಬೇಕು. ಸುರಕ್ಷಿತ ಎಂಬ ಕಾರಣಕ್ಕಾಗಿ ನೀವು ಪ್ರಸಿದ್ಧ ಬ್ರಾಂಡ್‌ಗಳ ಪ್ಯಾಕೇಜ್ಡ್ ಕುಡಿಯುವ ನೀರನ್ನು ಬಳಸುತ್ತಿದ್ದೀರಾ? ಇವುಗಳ ಅಸಲಿ ಬಣ್ಣ ಇದೀಗ ಬಯಲಾಗಿದೆ.

ಮಾರುಕಟ್ಟೆಯ ಪ್ರಸಿದ್ಧ ಬ್ರಾಂಡ್‌ಗಳ ಬಾಟಲಿ ನೀರಿನಲ್ಲಿ ಅಪಾಯಕಾರಿ ಕೊಲಿಫಾರ್ಮ್ ಬ್ಯಾಕ್ಟೀರಿಯಾಗಳು ಇರುವುದನ್ನು ಕೇರಳ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪತ್ತೆ ಮಾಡಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಕಿನ್ಲೆ ಹಾಗೂ ಕಿಂಗ್‌ಫಿಶರ್ ಬಾಟಲಿಗಳ ನೀರಲ್ಲಿ ಇವುಗಳನ್ನು ಪತ್ತೆ ಮಾಡಲಾಗಿದೆ. ಇದರ ಜತೆಗೆ ಸ್ಥಳೀಯ ಬ್ರಾಂಡ್‌ಗಳಾದ ಪ್ಯೂರ್‌ಡ್ರಾಪ್ಸ್, ಚಂದ್ರಿಕಾ ಹಾಗು ಗೋಪಿಕಾ ಕೂಲ್‌ವಾಟರ್‌ನಲ್ಲೂ ಈ ಬ್ಯಾಕ್ಟೀರಿಯಾ ಇರುವುದನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಸ್ಪಷ್ಟಪಡಿಸಿದೆ. ಪ್ರಯೋಗಾಲಯ ವರದಿಯಲ್ಲಿ ಕಿನ್‌ಫಿಶರ್ ಎಂದು ಉಲ್ಲೇಖಿಸಿದ್ದರೂ, ಅದು ಕಿಂಗ್‌ಫಿಷರ್ ಎಂದು ಮಂಡಳಿ ಹೇಳಿದೆ.

ಕೊಚ್ಚಿನ್‌ನ ಕೇಂದ್ರೀಯ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾದ ನೀರಿನ ವರದಿ ಲಭ್ಯವಾಗಿದ್ದು, ತ್ರಿಶ್ಶೂರ್ ಹಾಗೂ ಆಲಪ್ಪುಝದಿಂದ ಕಳೆದ ಫೆಬ್ರವರಿಯಲ್ಲಿ ಈ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ ಬ್ಯಾಕ್ಟೀರಿಯಾ ಹಾಗೂ ಕಲ್ಮಶಕ್ಕೆ ಕಾರಣವಾಗುವ ಅಂಶಗಳು ಪತ್ತೆಯಾಗಿವೆ. ಮಾರ್ಚ್ 28ರಂದು ನೀಡಿದ ವರದಿಯ ಪ್ರಕಾರ, ಐದು ಬ್ರಾಂಡ್‌ಗಳ ಕುಡಿಯುವ ಪ್ರತಿ 100 ಮಿಲಿ ಲೀಟರ್ ನೀರಿನಲ್ಲಿ 2 ರಿಂದ 41 ಕಾಲನಿ ಫಾರ್ಮಿಂಗ್ ಯುನಿಟ್ (ಸಿಎಫ್‌ಯು) ಪತ್ತೆಯಾಗಿದೆ. ನೀರು ಕುಡಿಯಲು ಸುರಕ್ಷಿತವಾಗಿರಬೇಕಾದರೆ, ಈ ಪ್ರಮಾಣ ಶೂನ್ಯ ಇರಬೇಕು ಎಂದು ಸಾರ್ವಜನಿಕ ಆರೋಗ್ಯ ಸೇವೆಯ ಜಿಲ್ಲಾ ಅಧಿಕಾರಿ ಡಾ.ಮೀನಾಕ್ಷಿ ಹೇಳಿದ್ದಾರೆ. ಯಾವುದೇ ಬಗೆಯ ಬ್ಯಾಕ್ಟೀರಿಯಾಗಳು ಕುಡಿಯುವ ನೀರಿನಲ್ಲಿದ್ದರೆ, ಡಯೇರಿಯಾದಂಥ ಜಲಜನ್ಯ ರೋಗಕ್ಕೆ ಕಾರಣವಾಗುತ್ತವೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ವಿವಿಧ ಕಡೆಗಳಿಂದಲೂ ಮಾದರಿ ಸಂಗ್ರಹಿಸಲಾಗಿದ್ದು, ಈ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಆಹಾರ ಸುರಕ್ಷತಾ ಆಯುಕ್ತ ಜಿ.ಆರ್.ಗೋಕುಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News