ಕಾಶ್ಮೀರದಲ್ಲಿ ಪೆಲೆಟ್‌ಗನ್ ಉಪಯೋಗಿಸದಂತೆ ಭದ್ರತಾ ಪಡೆಗಳಿಗೆ ರಾಜನಾಥ್ ಒತ್ತಾಯ

Update: 2016-07-24 14:18 GMT

ಹೊಸದಿಲ್ಲಿ, ಜು,24: ಜಮ್ಮು-ಕಾಶ್ಮೀರದಲ್ಲಿ ಶಾಂತಿಗಾಗಿ ರವಿವಾರ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಮನವಿ ಮಾಡಿದ್ದಾರೆ. ಇದೇ ವೇಳೆ, ಕಾಶ್ಮೀರದ ವಿಷಯದಲ್ಲಿ ಮಧ್ಯಪ್ರವೇಶ ನಡೆಸದಂತೆ ಅವರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅಶಾಂತ ಕಾಶ್ಮೀರಕ್ಕೆ ನೀಡಿದ 2 ದಿನಗಳ ಭೇಟಿಯ ಕೊನೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜನಾಥ್, ಕಾಶ್ಮೀರ ಕಣಿವೆಯಲ್ಲಿ ಶಾಂತಿ ಹಾಗೂ ಸಹಜತೆ ಕಾಪಾಡುವಂತೆ ತಾನು ಜನರಿಗೆ ಮನವಿ ಮಾಡುತ್ತೇನೆ ಎಂದರು.

ಹಿಂಸಾಚಾರದಲ್ಲಿ ಮೃತಪಟ್ಟಿರುವ ಕುಟುಂಬಗಳಿಗೆ ಅವರು ಸಂತಾಪ ಸೂಚಿಸಿದರು. ಹಲವು ಮಂದಿ ಪ್ರತಿಭಟನಕಾರರನ್ನು ದೃಷ್ಟಿಹೀನಗೊಳಿಸಿರುವ ಪೆಲೆಟ್ ಗನ್‌ಗಳನ್ನು ಉಪಯೋಗಿಸದಂತೆ ರಾಜನಾಥ್ ಭದ್ರತಾ ಪಡೆಗಳನ್ನು ಒತ್ತಾಯಿಸಿದರು.

ಜು.8ರಂದು ಉಗ್ರಗಾಮಿ ಕಮಾಂಡರ್ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಾಶ್ಮೀರದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ವೇಳೆ 48ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, ಕಣಿವೆಯ ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳಗೊಮಡಿದ್ದಾರೆಂದು ಅವರು ಹೇಳಿದರು.

ಭಾರತ ಸರಕಾರವು ಭಯೋತ್ಪಾದನೆಯನ್ನು ಎಂದೂ ಸಹಿಸದು ಎಂದ ರಾಜನಾಥ್, ಪಾಕಿಸ್ತಾನವು ಇಸ್ಲಾಮಾಬಾದ್‌ನ ಲಾಲ್ ಮಸ್ಜಿದ್‌ನಲ್ಲಿ ಉಗ್ರವಾದಿಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದರೆ, ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುವಂತೆ ಹುರಿದುಂಬಿಸುತ್ತಿದೆಯೆಂದು ವಾಗ್ದಾಳಿ ನಡೆಸಿದರು.

ಅದು ನಿಲ್ಲಬೇಕು. ಪಾಕಿಸ್ತಾನದ ಪಾತ್ರವು ಸರಿಯಾದುದಲ್ಲ. ಅದು ತನ್ನ ಧೋರಣೆ ಬದಲಾಯಿಸಲೇಬೇಕು ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News