ಫುಟ್ಬಾಲ್ ಅಂಗಳಕ್ಕಿಳಿದ ಬಾಬಾ ರಾಮದೇವ್!

Update: 2016-07-26 07:05 GMT

ಹೊಸದಿಲ್ಲಿ, ಜು.26: ಅವರು ಫುಟ್ಬಾಲ್ ದಂತಕಥೆ ಡೇವಿಡ್ ಬೆಕಮ್ ಅವರಂತೆ ಬಗ್ಗದೇ ಇರಬಹುದು. ಆದರೆ ತಾನು ಎಲ್ಲದಕ್ಕೂ ಸೈ ಎನ್ನುವುದನ್ನು ಯೋಗ ಗುರು ಬಾಬಾ ರಾಮ್ ದೇವ್ ತೋರಿಸಿಯೇಬಿಟ್ಟರು. ಹೇಗೆ ಅಂತೀರಾ? ದಿಲ್ಲಿಯ ಜವಾಹರ್ ಲಾಲ್ ನೆಹರೂ ಸ್ಟೇಡಿಯಮ್‌ನಲ್ಲಿ ರವಿವಾರ ರಾತ್ರಿ ಆಯೋಜಿಸಲಾದ ಚ್ಯಾರಿಟಿ ಫುಟ್ಬಾಲ್ ಪಂದ್ಯಾಟಕ್ಕಾಗಿ ಅಂಗಣದಲ್ಲಿ ಇಳಿದು ಚೆಂಡನ್ನು ಅಟ್ಟಿಸಿದ ರೀತಿಯಿಂದ.

ಕಾವಿ ಬಣ್ಣದ ಧೋತಿ ಹಾಗೂ ಅದೇ ಬಣ್ಣದ ಶೂ ಧರಿಸಿ ಸ್ಟೇಡಿಯಮ್‌ಗೆ ಆಗಮಿಸಿದ ಬಾಬಾ ರಾಮ್ ದೇವ್ ಸಂಸದರು ಹಾಗೂ ಬಾಲಿವುಡ್ ನಟರ ನಡುವೆ ನಡೆದ ಈ ಸ್ನೇಹ ಪಂದ್ಯದಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು.

ಅಂದ ಹಾಗೆ ಈ ಫುಟ್ಬಾಲ್ ಪಂದ್ಯಾಟದಲ್ಲಿ ಬಾಬಾ ರಾಮ್ ದೇವ್ ಅವರ ಸ್ಪೆಶಲ್ ಅಪಿಯರೆನ್ಸ್‌ಗೆ ಒಂದು ಕಾರಣವೂ ಇತ್ತು. ಅವರು ಪ್ರಧಾನಿ ನರೇಂದ್ರ ಮೋದಿಯವರ ಎರಡು ಮಹತ್ವಾಕಾಂಕ್ಷೆಯ ಯೋಜನೆಗಳಾದ ಸ್ವಚ್ಛ್ ಭಾರತ್ ಅಭಿಯಾನ್ ಹಾಗೂ ಬೇಟಿ ಬಚಾವೋ ಬೇಟಿ ಪಢಾವೋ ಅಭಿಯಾನದ ಬಗ್ಗೆ ಅರಿವನ್ನುಂಟು ಮಾಡಲು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆಲ್ ಸ್ಟಾರ್ಸ್‌ ಫುಟ್ಬಾಲ್ ಕ್ಲಬ್ ನಾಯಕತ್ವವನ್ನು ಅಭಿಷೇಕ್ ಬಚ್ಚನ್ ವಹಿಸಿದ್ದರೆ ತಂಡದಲ್ಲಿ ಅರ್ಜುನ್ ಕಪೂರ್, ರಣಬೀರ್ ಕಪೂರ್, ಡೀನೋ ಮೊರಿಯಾ, ಸಿದ್ಧಾರ್ಥ್ ಮಲ್ಹೋತ್ರಾ ಮತ್ತಿತರರಿದ್ದರು. ಘನ ಕೈಗಾರಿಕೆಗಳ ಸಚಿವ ಬಾಬುಲ್ ಸುಪ್ರಿಯೋ ಸಂಸದರ ತಂಡದ ನಾಯಕರಾಗಿದ್ದರೆ, ಮಾಜಿ ಭಾರತೀಯ ಫುಟ್ಬಾಲ್ ತಂಡದ ಕ್ಯಾಪ್ಟನ್ ಹಾಗೂ ತೃಣಮೂಲ ಕಾಂಗೆಸ್ ಪಕ್ಷದ ಸಂಸದ ಪ್ರಸುನ್ ಬ್ಯಾನರ್ಜಿ, ಬಿಜೆಪಿ ಸಂಸದ ಮನೋಜ್ ತಿವಾರಿ, ಭೋಲಾ ಸಿಂಗ್, ತೆಲುಗು ದೇಸಂ ಪಕ್ಷದ ರಾಮ್ ಮೋಹನ್ ನಾಯ್ಡು ಮತ್ತಿತರರಿದ್ದರು.

ಈ ಪಂದ್ಯವನ್ನು ಖಾಸಗಿ ಆರ್ಟ್ ಗ್ಯಾಲರಿ ಆಧುನಿಕ್ ಆಯೋಜಿಸಿತ್ತು. ಪಂದ್ಯಾಟದ ಟಿಕೆಟ್ ಮಾರಾಟದಿಂದ ಬಂದ ಹಣವನ್ನು ಪ್ರಧಾನಿಯ ಬೇಟಿ ಪಢಾವೋ, ಬೇಟಿ ಬಚಾವೋ ಹಾಗೂ ಸ್ವಚ್ಛ್ ಭಾರತ್ ಅಭಿಯಾನಕ್ಕೆ ಕೊಡುಗೆಯಾಗಿ ನೀಡಲಾಯಿತು.

ಈ ಅಭಿಯಾನಕ್ಕೆ ಬಾಬಾ ರಾವದೇವ್ ಯಾವುದೇ ಹಣಕಾಸು ಸಹಾಯ ಮಾಡಿರದೇ ಇದ್ದರೂ, ಅವರ ಪತಂಜಲಿ ಆಯುರ್ವೇದ್ ಕಂಪೆನಿ ಕ್ರೀಡಾಳುಗಳಿಗೆ ಶಕ್ತಿಪೇಯ ಹಾಗೂ ತಿನಿಸುಗಳನ್ನು ಸರಬರಾಜು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News